ತಿರುವನಂತರಪುರಂ: ಈಚೆಗಷ್ಟೇ ಭಾರೀ ಸದ್ದು ಮಾಡಿದ್ದ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾ ಎಲ್ಲರಿಗೂ ಗೊತ್ತೇ ಇದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಪ್ಲಾನ್‍ನಂತೆಯೇ ಟ್ಯಾಂಕರ್‌ವೊಂದರಲ್ಲಿ ಅರ್ಧ ಭಾಗ ಗಂಧದ ಮರದ ತುಂಡುಗಳನ್ನಿಟ್ಟು, ಉಳಿದ ಅರ್ಧ ಭಾಗದಲ್ಲಿ ಹಾಲನ್ನು ತುಂಬಿಸಿ ಸಾಗಿಸುತ್ತಿರುತ್ತಾರೆ. ಅಂತಹದ್ದೇ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಕೇರಳದ ಕೊಚ್ಚಿಯಲ್ಲಿರುವ ಸರಕು ಸಾಗಣೆ ಕೇಂದ್ರದಿಂದ (ಸಿಎಫ್‍ಎಸ್) ತೈಲದ ಕಂಟೈನರ್‍ವೊಂದರಲ್ಲಿ ಸಾಗಿಸುತ್ತಿದ್ದ ಸುಮಾರು 2,200 ಕೆ.ಜಿ ರಕ್ತಚಂದನ ತುಂಡುಗಳನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೊಚ್ಚಿಯ ವಿಲ್ಲಿಂಗ್ಡನ್ ಐಲ್ಯಾಂಡ್‍ನಲ್ಲಿರುವ ಕ್ಯೂ10 ಹೆಸರಿನ ಸಿಎಫ್‍ಎಸ್ ಕೇಂದ್ರದಲ್ಲಿ ಸಂಗ್ರಹಿಸಿದ್ದ ರಕ್ತಚಂದನವನ್ನು ಕಂಟೈನರ್‌ನಲ್ಲಿ ಸಾಗಿಸುವ ವೇಳೆ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ತೈಲವನ್ನು ಸಾಗಿಸುವ ಕಂಟೈನರ್‌ನಲ್ಲಿ ಮರದ ದಿಮ್ಮಿಗಳನ್ನು ಜಾಣ್ಮೆಯಿಂದ ಬಚ್ಚಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಕಂಟೈನರ್ ಅನ್ನು ಕತ್ತರಿಸಿ ಮರದ ದಿಮ್ಮಿಗಳನ್ನು ಪತ್ತೆಹಚ್ಚಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆಯೂ ಇದೇ ರೀತಿ ರಕ್ತಚಂದನ ಗಂಧದ ಮರಗಳನ್ನು ಸಾಗಿಸುತ್ತಿದ್ದ ವೇಳೆ ಗುಪ್ತಚರ ಇಲಾಖೆ ಪತ್ತೆಹಚ್ಚಿದ್ದವು.
ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ಮಂಗಳವಾರ ರಾತ್ರಿ ಬಂದಿರುವ ಆಂಧ್ರಪ್ರದೇಶದಿಂದ ಬಂದಿದ್ದ ಈ ಕಂಟೈನರ್‌ಗಳು ಬುಧವಾರ ಬೆಳಿಗ್ಗೆ ಕೊಚ್ಚಿಯಿಂದ ದುಬೈಗೆ ರವಾನಿಸಲು ಕಾಯ್ದಿರಿಸಲಾಗಿತ್ತು. ದುಬೈನಿಂದ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಈ ಮರದ ತುಂಡುಗಳನ್ನು ಸಾಗಿಸಲು ಪ್ಲಾನ್ ಮಾಡಲಾಗಿತ್ತು ಎಂದಿದ್ದಾರೆ.
ಚೀನಾ, ಸಿಂಗಾಪುರ ಮತ್ತು ಜಪಾನ್‍ನಂತಹ ದೇಶಗಳಲ್ಲಿ ರಕ್ತಚಂದನ ಮರದ ದಿಮ್ಮಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಪೂರ್ವ ಘಟ್ಟಗಳ ಕಾಡುಗಳಲ್ಲಿ ಬೆಳೆಯಲಾಗುವ ಈ ಮರಗಳನ್ನು ದಕ್ಷಿಣ ಏಷ್ಯಾದ ದೇಶಗಳಲ್ಲಿ ಔಷಧೀಯ ಉದ್ದೇಶಗಳಿಗಾಗಿ ಮತ್ತು ಸಂಗೀತ ಉಪಕರಣಗಳನ್ನು ತಯಾರಿಸಲು ಬಳಸಲಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಉಗ್ರರ ದಾಳಿ ಸಂದೇಶ: ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ
ಮಾಹಿತಿಯ ಪ್ರಕಾರ ಕಂಟೈನರ್ ಬುಕ್ಕಿಂಗದದ ಮಾಡಿದ ಏಜೆನ್ಸಿಯ ಮಾಹಿತಿಯನ್ನು ಪತ್ತೆಹಚ್ಚಲಾಗುತ್ತಿದೆ. ಕಂಟೈನರ್ ಬಗ್ಗೆಯೂ ವಿವರ ಸಂಗ್ರಹಿಸಲಾಗುತ್ತಿದೆ. ಸದ್ಯ ಯಾರನ್ನೂ ಬಂಧಿಸಲಾಗಿಲ್ಲ. ಆದರೆ, ಕಂಟೈನರ್ ಹಿಂದಿರುವ ಶಂಕಿತರನ್ನು ಪಟ್ಟಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ನಿರ್ವಹಣೆಯಲ್ಲಿ ಭಾರತ ಜಗತ್ತಿಗೆ ಮಾದರಿ- ಜಾಗತಿಕ ನಾಯಕರು