ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧ ಜಯಗಳಿಸಿದ ವ್ಯಕ್ತಿಯೊಬ್ಬರು ಎರಡು ಬಾರಿ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹೌದು ಅನಂತ್ ಕುಮಾರ್ ಬ್ಯಾಡಗಿ ಎಂಬುವವರಿಗೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕೊರೊನಾ ಸೋಂಕು ದೃಢಪಟ್ಟಿತ್ತು. ಆಗ ಯಾವುದಕ್ಕೂ ಧೃತಿಗೆಡದೆ ಕೊರೊನಾ ವೈರಸ್ ನಿಂದ ಗುಣಮುಖರಾಗಿರುವ ಅನಂತ್ ಕುಮಾರ್ ಅವರು ಸುಮಾರು ಎರಡು ಬಾರಿ ಪ್ಲಾಸ್ಮಾ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆಗಸ್ಟ್ 6ರಂದು ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿದ್ದ ಅವರು, ಇಂದು ಹುಬ್ಬಳ್ಳಿಯ ಆರ್.ಬಿ.ಪಾಟೀಲ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿರುವುದು ವಿಶೇಷವಾಗಿದೆ. ಮೂಲತಃ ಗುತ್ತಿಗೆದಾರರಾದ ಅನಂತ್ ಕುಮಾರ್ ಅವರು ಕೊರೊನಾ ವೈರಸ್ ನಿಯಂತ್ರಣಕ್ಕೆ ಸ್ವಯಂಪ್ರೇರಿತರಾಗಿ ಪ್ಲಾಸ್ಮಾ ದಾನಕ್ಕೆ ಮುಂದಾಗಿರುವುದು ಪ್ರಶಂಸೆಗೆ ಪಾತ್ರರಾಗಿದೆ.
ವೈದ್ಯರ ಸೇವೆಯಿಂದ ನಾನು ಗುಣಮುಖನಾಗಿದ್ದೇನೆ. ಆದ್ದರಿಂದ ಸೋಂಕಿತರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮೂಲಕ ಕೊರೊನಾ ನಿಯಂತ್ರಣಕ್ಕಾಗಿ ಪ್ಲಾಸ್ಮಾ ದಾನ ಮಾಡಲು ಮುಂದಾಗಿರುವುದಾಗಿ ಹೇಳಿದ್ದಾರೆ.