ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ 2 ದಿನಗಳ ಕಾಲ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಆರೋಗ್ಯ ಸಚಿವ ಶ್ರೀರಾಮುಲು ಅವರ ತಾಯಿಯ ಪುಣ್ಯ ತಿಥಿಯಲ್ಲಿ ಪಾಲ್ಗೊಳ್ಳಲು ಆಗಸ್ಟ್ 30 ಮತ್ತು 31 ರಂದು ಬಳ್ಳಾರಿಗೆ ತೆರಳು ಜನಾರ್ದನ ರೆಡ್ಡಿಗೆ ಅನುಮತಿ ನೀಡಲಾಗಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮತ್ತು ನ್ಯಾ.ಬಿ.ಆರ್ ಗವಾಯಿ ಮತ್ತು ನ್ಯಾ.ಕೃಷ್ಣ ಮುರಾರಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಜರ್ನಾದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಅನುಮತಿ ನೀಡಿದೆ. ಈ ಹಿಂದೆ ರೆಡ್ಡಿ ಜಾಮೀನು ಪಡೆದ ವೇಳೆ ಬಳ್ಳಾರಿಗೆ ತೆರಳದಂತೆ ಕೋರ್ಟ್ ಷರತ್ತು ವಿಧಿಸಿತ್ತು.
ಬೆಂಗಳೂರಿನಲ್ಲೇ ಉಳಿದುಕೊಂಡಿರುವ ಜನಾರ್ದನ ರೆಡ್ಡಿ ಶ್ರೀರಾಮುಲು ಅವರ ತಾಯಿ ನಿಧನರಾದ ಸಂದರ್ಭದಲ್ಲಿ ಸಂತಾಪ ಸೂಚಿಸಿ ಕಣ್ಣೀರಿಟ್ಟಿದ್ದರು. ಇಂತಹ ಸಂದರ್ಭದಲ್ಲಿಯೂ ಕಾನೂನು ನನ್ನನ್ನು ಕಟ್ಟಿಹಾಕಿದೆ. ಜೀವದ ಗೆಳೆಯ ಶ್ರೀರಾಮುಲುಗೆ ಹೇಗೆ ಸಂತೈಸಲಿ, ತಾಯಿಯ ಅಗಲಿಕೆಯ ದುಃಖ ತಡೆಯಲಾಗುತ್ತಿಲ್ಲ. ವಿಡಿಯೋ ಕರೆಯ ಮೂಲಕ ತಾಯಿಯ ದರ್ಶನವನ್ನು ಪಡೆದುಕೊಳ್ಳುವ ಅನಿವಾರ್ಯತೆ ಬಂದಿದೆ ಎಂದು ಹೇಳಿದ್ದರು.