ತುಮಕೂರು: ಮುಖ್ಯಮಂತ್ರಿ ಬಿಸ್‍ವೈ ಕರೆ ಮಾಡಿ ನನ್ನ ಬಳಿ ಇರುವ ಎರಡು ಖಾತೆಯಲ್ಲಿ ಒಂದನ್ನು ಬಿಡಲು ಹೇಳಿದಾಗ ನನ್ನ ಮನಸ್ಸಿಗೆ ನೋವಾಯಿತು. ನನ್ನ ನಿಷ್ಠೆ ನನಗೆ ಮುಳುವಾಯಿತು ಅನ್ನಿಸಿತು ಎಂದು ಸಚಿವ ಮಾಧುಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ತುಮಕೂರಿನಲ್ಲಿ ದ್ವಜಾರೋಹಣ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಬಳಿ ಇರುವ ಎರಡು ಖಾತೆಗಳಲ್ಲಿ ಒಂದು ಬಿಡುವಂತೆ ಸಿಎಂ ಕೇಳಿದ್ದರು. ಇದರಿಂದ ಮನಸ್ಸಿಗೆ ನೋವಾಯಿತು. ನಿಷ್ಠೆ ನನಗೆ ಮುಳುವಾಯಿತು ಎಂದು ಅನ್ನಿಸುತ್ತದೆ. ನಾಲ್ಕು ಬಾರಿ ಖಾತೆ ಬದಲಾವಣೆ ಮಾಡಿದ್ದು ತುಂಬಾ ಬೇಸರವಾಗಿದೆ. ನಾನು ದೊಡ್ಡ ಖಾತೆ ಕೇಳಿಲ್ಲ, ಸಣ್ಣ ನೀರಾವರಿ ಖಾತೆ ಬಯಸಿದ್ದೆನು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಶ್ರಮದಿಂದ ನಮಗೆ ನೆರವಾದವರಿಗೆ ನಾನು ಶ್ರಮಿಸಬೇಕು ಎಂದು ನಾನು ಸಚಿವನಾಗಿದ್ದೇನೆ. ದ್ವಜಾರೋಹಣ ಬಳಿಕ ಗುಡ್ ಬಾಯ್ ಹೇಳುವುದಾಗಿ ನಿನ್ನೆ ಹೇಳಿದ್ದೆ. ಹಿರಿಯರು ನಿನ್ನೆ ಕುಳಿತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ನಾನು ಸಣ್ಣ ನೀರಾವರಿ ಖಾತೆಗೆ ಪಟ್ಟು ಹಿಡಿದಿಲ್ಲ. ಚಿಕ್ಕನಾಯಕನಹಳ್ಳಿ ಕೆರೆ ತುಂಬಿಸಲು ಶ್ರಮ ವಹಿಸಿದೆ ಎಂದಿದ್ದಾರೆ.
ಖಾತೆ ಬದಲಾವಣೆ ವಿಚಾರದಲ್ಲಿ ನನಗೆ ಅವಮಾನವಾಗಿತ್ತು. ಹಿರಿಯರ ಸಲಹೆ ಮೇರೆಗೆ ಸಮಾಧಾನವಾಗಿದ್ದೇನೆ. ಮತ್ತೊಬ್ಬರ ಖಾತೆ ಬಗ್ಗೆ ನಾನು ಚರ್ಚಿಸುವುದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ ಎಂದಿದ್ದೆನು. ಪದೇ ಪದೇ ಖಾತೆ ಬದಲಾವಣೆಯಿಂದಾಗಿ ಹರ್ಟ್ ಆಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.