2 ಕೋಟಿ ಕೋವಿಡ್ ಲಸಿಕೆಗೆ ಜಾಗತಿಕ ಟೆಂಡರ್: ಡಿಸಿಎಂ

Public TV
4 Min Read
Ashwathnarayan 1

ಡಿಸಿಎಂ ನೇತೃತ್ವದ ಉನ್ನತ ಸಭೆಯಲ್ಲಿ ತೀರ್ಮಾನ

– ಅಗತ್ಯ ಔಷಧಿ, RAT ಕಿಟ್‌, RTPCR ಕಿಟ್‌ ಖರೀದಿಗೆ ಸಮ್ಮತಿ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ವ್ಯಾಕ್ಸಿನ್ ಬೇಡಿಕೆಯನ್ನು ಪೂರೈಸಲು ಎರಡು ಕೋಟಿ ಕೋವಿಡ್ ಲಸಿಕೆಯನ್ನು ಜಾಗತಿಕ ಟೆಂಡರ್ ಮೂಲಕ ಖರೀದಿ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

Ashwathnarayan2

3 ಕೋಟಿ ವ್ಯಾಕ್ಸಿನ್ ಖರೀದಿಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ 1 ಕೋಟಿ ಕೋವ್ಯಾಕ್ಸಿನ್, 2 ಕೋಟಿ ಕೋವಿಶೀಲ್ಡ್ ಲಸಿಕೆ ಸೇರಿದೆ. 18 ವರ್ಷದಿಂದ ಮೇಲ್ಪಟ್ಟು ಜನರಿಗೆ ಲಸಿಕೆ ಕೊಡಲು ಆರಂಭಿಸಿದ ನಂತರ  ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಖರೀದಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಡಿಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಆಖ್ತರ್, ಔಷಧಿ ಖರೀದಿ ಉಸ್ತುವಾರಿ ಅಂಜುಂ ಪರ್ವೇಜ್, ರಾಜ್ಯ ಔಷಧ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಲತಾ ಕುಮಾರಿ, ಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ್ ಪಾಟೀಲ್ ಸಭೆಯಲ್ಲಿ ಭಾಗಿಯಾಗಿದ್ದರು.

ಸಭೆಯ ನಂತರ ಮಾಹಿತಿ ನೀಡಿದ ಡಿಸಿಎಂ, ಈವರೆಗೂ ಕೇಂದ್ರ ಸರಕಾರ ಹಂಚಿಕೆ ಮಾಡುತ್ತಿದ್ದ ಲಸಿಕೆಯನ್ನು ಬಿಟ್ಟರೆ ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್ ಕರೆದು ಖಾಸಗಿ ಕಂಪನಿಗಳಿಂದ ಖರೀದಿ ಮಾಡಿರಲಿಲ್ಲ. ಇವತ್ತೇ ಟೆಂಡರ್ ಕರೆಯಲು ಸೂಚಿಸಲಾಗಿದ್ದು, ಯಾವ ಕಂಪನಿ ಬೇಕಾದರೂ ಟೆಂಡರ್‍ನಲ್ಲಿ ಭಾಗವಹಿಸಬಹುದು. ಏಳು ದಿನದ ಒಳಗಾಗಿ ಈ ಪ್ರಕ್ರಿಯೆ ಮುಗಿಸಿ ಟೆಂಡರ್ ಪಡೆಯುವ ಕಂಪನಿಯು ಲಸಿಕೆಯನ್ನು ಪೂರೈಕೆ ಆರಂಭಿಸಬೇಕು ಎಂದರು.

1 ಲಕ್ಷ ಪಲ್ಸ್ ಆಕ್ಸಿ ಮೀಟರ್ ಖರೀದಿ:

ಸೋಂಕಿತರಿಗೆ ಅಗತ್ಯವಾದ ಪಲ್ಸಾಕ್ಸಿ ಮೀಟರ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕೂಡಲೇ ಒಂದು ಲಕ್ಷ ಪಲ್ಸಾಕ್ಸಿ ಮೀಟರ್‍ಗಳನ್ನು ಖರೀದಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಅವುಗಳನ್ನು ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಹಂಚಲಾಗುವುದು. ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮತ್ತು ಸೋಂಕಿತರು ಗುಣಮುಖರಾದ ನಂತರ ವಾಪಸ್ ಪಡೆಯುವುದು ಆಯಾ ಡಿಎಚ್‍ಒ & ಟಿಎಚ್‍ಒ ಹೊಣೆ. ಈ ಮೂಲಕ ಪಲ್ಸಾಕ್ಸಿ ಮೀಟರ್ ಬ್ಯಾಂಕ್ ಮಾಡುವ ಉದ್ದೇಶ ಇದೆ ಎಂದು ಡಿಸಿಎಂ ಹೇಳಿದರು.

ಸೋಂಕಿತರಿಗೆ ಅತ್ಯಗತ್ಯವಾಗಿ ಬೇಕಾದ ಐವರ್‍ಮೆಕ್ಟಿನ್ ಮಾತ್ರೆಯನ್ನು 10 ಲಕ್ಷ ಖರೀದಿ ಮಾಡಲಾಗಿದ್ದು, ಇದೇ 14ಕ್ಕೆ ಪೂರೈಕೆ ಶುರುವಾಗುತ್ತದೆ. ಅಲ್ಲದೆ, ಇನ್ನೂ 25 ಲಕ್ಷ ಮಾತ್ರೆ ಖರೀದಿಸುವಂತೆ ಸೂಚಿಸಿದ್ದೇನೆ. ಇದು ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಲಭ್ಯ ಇರಬೇಕು. ಜತೆಗೆ, 35 ಲಕ್ಷ ಜಿಂಕ್ ಟ್ಯಾಬ್ಲೆಟ್ ಹಾಗೂ ಒಂದು ಕೋಟಿ ಕಾಲ್ಸಿಚಿನ್ ಮಾತ್ರೆಗಳನ್ನೂ ಕೂಡಲೇ ಖರೀದಿ ಮಾಡಲು ನಿರ್ಧರಿಸಲಾಗಿದೆ. ಈ ಎಲ್ಲ ಔಷಧಿಗಳು ರಾಜ್ಯದ ಎಲ್ಲ ಜಿಲ್ಲಾ, ತಾಲೂಕು, ಆಸ್ಪತ್ರೆ ಹಾಗೂ ಪ್ರಾಥಮಿಕ & ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

ಈಗ 10.50 ಲಕ್ಷ ರಾಟ್ ಕಿಟ್ ಇವೆ, ಇನ್ನೂ ವಾರಕ್ಕೆ ಆಗುತ್ತವೆ. ಈಗ ದಿನಕ್ಕೆ 50 ಸಾವಿರದಂತೆ ಪೂರೈಕೆ ಆಗುತ್ತಿವೆ. ಜತೆಗೆ, 37 ಲಕ್ಷ ಆರ್‍ಟಿಪಿಸಿಆರ್ ಕಿಟ್‍ಗಳನ್ನೂ ಖರೀದಿ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ರೆಮಿಡಿಸಿವರ್ ಸರಬರಾಜು ಮಾಡದ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ:

ಇದೇ ವೇಳೆ ಮುಖ್ಯ ಕಾರ್ಯದರ್ಶಿಗಳ ಜತೆ ಮಾತನಾಡಿದ ಡಿಸಿಎಂ ಅವರು, ನೊಟೀಸ್ ಕೊಟ್ಟರೂ ಸಕಾಲಕ್ಕೆ ರೆಮಿಡಿಸಿವರ್ ಪೂರೈಕೆ ಮಾಡದ ಕಂಪನಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರನ್ನು ದಾಖಲು ಮಾಡಿಕೊಳ್ಳುವ ಮುನ್ನ ಭೌತಿಕ ಪರೀಕ್ಷೆ ನಡೆಸಿಯೇ ದಾಖಲು ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಗಂಭೀರ ಸೋಂಕಿತರಿಗೆ ಹಾಸಿಗೆಗಳು ಸಿಗುತ್ತವೆ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಲಸಿಕೆಗಾಗಿ ಹಳ್ಳಿಗಳಿಗೆ ಹೋಗುವುದು ಬೇಡ:

ನಗರದ ಜನರು ಲಸಿಕೆ ಪಡೆಯಲು ಗ್ರಾಮೀಣ ಪ್ರದೇಶಕ್ಕೆ ಹೋಗುವುದು ಬೇಡ. ಅವರು ನಗರದಲ್ಲೇ ಲಸಿಕೆ ಪಡೆಯಲಿ. ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆ ಮಾಡಲು ಎಲ್ಲ ಕ್ರಮ ವಹಿಸಲಾಗಿದೆ ಎಂದ ಡಿಸಿಎಂ, ಈ ಬಗ್ಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *