2 ದಿನದಲ್ಲಿ ಬೀದರ್‌ಗೆ ಮಿಡತೆ ಸೈನ್ಯ ಎಂಟ್ರಿ – ದಾಳಿ ತಡೆಯಲು ಏನೆಲ್ಲ ಕ್ರಮಕೈಗೊಳ್ಳಲಾಗಿದೆ?

Public TV
2 Min Read
locust bidar

ಬೀದರ್: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ದಾಳಿ ಮಾಡಿರುವ ಮಿಡತೆಗಳ ದಂಡು ಈಗ ರಾಜ್ಯದ ಬೀದರ್ ಜಿಲ್ಲೆಗೂ ದಾಳಿ ಮಾಡುವ ಸಾಧ್ಯತೆಯಿದೆ.

ರೈತರ ತೋಟದ ಮೇಲೆ ದಾಳಿ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮಿಡತೆ ಸೈನ್ಯ ಎದುರಿಸಲು ಬೀದರ್ ಕೃಷಿ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ವಿದ್ಯಾನಂದ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

locust india

ಜಿಲ್ಲೆಯಲ್ಲಿ ಒಟ್ಟು 4 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದ್ದು, ಇದರಲ್ಲಿ ಕಬ್ಬು, ತರಕಾರಿ ಹಾಗೂ ಹಣ್ಣುಗಳನ್ನು ರೈತರು ಬೆಳೆದಿದ್ದಾರೆ. ಈಗಾಗಲೇ ರೈತರಿಗೆ ಕ್ರಿಮಿನಾಶಕ ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಲಾಗಿದೆ. ಒಂದು ಬಾರಿ ಕ್ರಿಮಿನಾಶಕ ಸಿಂಪಡಿಸಿದರೆ ನಾಲ್ಕು ಐದು ದಿನಗಳವರೆಗೆ ಕೀಟಗಳಿಂದ ತಡೆಯಬಹುದಾಗಿದೆ. ಒಂದು ವೇಳೆ ಮಿಡತೆ ದಾಳಿ ಮಾಡಿದರೆ ಎಲ್ಲಾ ರೀತಿ ಕ್ರಿಮಿನಾಶಕಗಳು ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ವಿದ್ಯಾನಂದ್ ಮಾಹಿತಿ ನೀಡಿದರು.

ಪ್ರಮುಖವಾಗಿ ಜಿಲ್ಲೆಯ ಗಡಿ ಭಾಗದ ತಾಲೂಕುಗಳಾದ ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ್ ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಮಟೆ ಹಾಗೂ ಭಿತ್ತಿ ಪತ್ರ ಹಂಚಲು ಕೃಷಿ ಇಲಾಖೆ ನಿರ್ಧಾರ ಮಾಡಿದೆ. ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಸದ್ಯ ಮಹಾರಾಷ್ಟ್ರದ ನಾಗ್ಪುರದಲ್ಲಿ ಮಿಡತೆ ಸೈನ್ಯ ದಾಳಿ ಮಾಡಿದ್ದು, ಸೊಲ್ಲಾಪುರ ಕಡೆಯಿಂದ ಬೀದರಿಗೆ ಮಿಡತೆಗಳ ದಂಡು ಎರಡು ದಿನಗಳಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ.

ಗಾಳಿ ಯಾವ ಭಾಗಕ್ಕೆ ಹೆಚ್ಚು ಬೀಸುತ್ತದೆಯೋ ಆ ಭಾಗಕ್ಕೆ ಹಿಂಡುಹಿಂಡಾಗಿ ವಲಸೆ ಹೋಗುತ್ತವೆ. ದಿನಕ್ಕೆ 200 ಕಿ.ಮೀಗೂ ಹೆಚ್ಚು ದೂರ ಸಾಗುವ ಸಾಮರ್ಥ್ಯ ಈ ಮಿಡತೆಗಳಿಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮಿಡತೆ ಹಾವಳಿ ಹೆಚ್ಚಿರುವ ಕಾರಣ ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ಮುಂಜಾಗೃತ ಕ್ರಮಕೈಗೊಳ್ಳಲಾಗಿದೆ.

ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿರುವ ಮಿಡತೆಗಳು ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ, ಹರ್ಯಾಣ, ಗುಜರಾತ್ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೃಷಿ ತೋಟಕ್ಕೆ ನುಗ್ಗಿ ಬೆಳೆಯನ್ನು ಹಾನಿ ಮಾಡುತ್ತಿವೆ. ಈಗ ಮಹಾರಾಷ್ಟ್ರದ ವಿದರ್ಭ, ಅಮರಾವತಿ, ವರ್ಧಾ, ನಾಗಪುರ ಜಿಲ್ಲೆಗಳಲ್ಲಿ ದಾಳಿ ಮಾಡಿದೆ. ಈಗಾಗಲೇ ರೈತರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಬೆಳೆಗಳ ಮೇಲೆ ಕೀಟನಾಶಕ ಸಿಂಪಡಿಸಲು ಸೂಚನೆ ನೀಡಲಾಗಿದೆ.

ಪ್ರತಿವರ್ಷ ಮಿಡತೆಗಳು ಪಾಕಿಸ್ತಾನ, ಇರಾನ್ ದಾಳಿ ಮಾಡುತ್ತಿರುತ್ತವೆ. ಮಿಡತೆ ಕಾಟ ತಡೆಯಲು ಪಾಕಿಸ್ತಾನ ತುರ್ತು ಪರಿಸ್ಥಿತಿಯನ್ನು ಪ್ರಕಟಿಸಿದೆ. ಮಿಡತೆಗಳಲ್ಲಿ ಹಲವು ಉಪಜಾತಿಗಳಿವೆ. ಅದರಲ್ಲೂ ಮರುಭೂಮಿ ಮಿಡತೆ ಭಾರೀ ಅಪಾಯಕಾರಿಯಾಗಿದ್ದು ಬೆಳೆಗಳನ್ನು ತಿನ್ನುತ್ತಾ ವಲಸೆ ಹೋಗುತ್ತವೆ.

https://twitter.com/Hidderkaran/status/1265961458959110146

ಪೂರಕ ವಾತವಾರಣ ಸಿಕ್ಕಿದಾಗ ಈ ಮರಭೂಮಿ ಮಿಡತೆಗಳು ಸಿಕ್ಕಾಪಟ್ಟೆ ಮೊಟ್ಟೆ ಇಡುತ್ತವೆ. ಕೇವಲ 1 ಚದರ ಮೀಟರ್‍ನಲ್ಲಿ 5000 ಮೊಟ್ಟೆಗಳ ಕ್ಲಸ್ಟರ್ ಇಡುತ್ತದೆ. ಮರಿಯಾದ ನಂತರ ಆಹಾರ ಅರಸುತ್ತಾ ಹೋಗುವ ಮಿಡತೆಗಳು ಕೃಷಿ ಭೂಮಿಯಲ್ಲಿ ಪೈರುಗಳನ್ನು ನೋಡಿದ ಕೂಡಲೇ ಇಳಿಯುತ್ತವೆ. ಕೋಟಿ ಸಂಖ್ಯೆಯ ಮಿಡತೆಗಳು ಒಂದೇ ಬಾರಿ ಬೆಳೆಯನ್ನು ತಿಂದು ತೇಗಿ ಮುಂದಕ್ಕೆ ಹೋಗುತ್ತವೆ.

ಜಾಗತಿಕ ತಾಪಮಾನ ಏರಿಕೆ ಅಥವಾ ಬಹಳ ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆಯಾಗಿ ವಾತಾವರಣದಲ್ಲಿ ಬದಲಾವಣೆಗಳಾದಾಗ ಈ ರೀತಿ ಮಿಡತೆಗಳ ದಾಳಿಯಾಗುತ್ತದೆ.

Share This Article