– ಆರ್ಥಿಕ ಸಮಸ್ಯೆ ನಿವಾರಿಸಲು ಪತಿ-ಪತ್ನಿ ನಿರ್ಧಾರ
ಹೈದರಾಬಾದ್: ಹೆತ್ತವರು 22 ಸಾವಿರಕ್ಕೆ ಮಾರಾಟ ಮಾಡಿದ್ದ 2 ತಿಂಗಳ ಗಂಡು ಮಗುವನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಮಗುವಿನ ತಂದೆ ವಿಪರೀತ ಕುಡಿತದ ಚಟ ಹೊಂದಿದ್ದಾನೆ. ಹೀಗಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರಿಂದ ತಮ್ಮ ಎರಡನೇ ಮಗುವನ್ನು ಶನಿವಾರ ರಾತ್ರಿ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ಪತಿ ಕುಡಿತದ ಚಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮಗುವನ್ನು ಮಾರಾಟ ಮಾಡಲು ಆತನೇ ನೇರ ಕಾರಣ ಎಂದು ಮಗುವಿನ ತಾಯಿ ಪೊಲೀಸರ ಬಳಿ ದೂರಿದ್ದಾಳೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಯಾರು ಮಗುವನ್ನು ತೆಗೆದುಕೊಂಡಿದ್ದಾರೋ ಅವರ ಕೈಯಿಂದ ಮಗುವನ್ನು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿ ಮಹಿಳೆಯೊಬ್ಬರಿಗೆ 22 ಸಾವಿರಕ್ಕೆ ಮಗುವನ್ನು ಮಾರಾಟ ಮಾಡಿದ್ದಾರೆ. ಮಗುವನ್ನು ನೀಡುವದಕ್ಕೂ ಮುನ್ನ ದಂಪತಿ ಬಾಂಡ್ ಗೆ ಸಹಿ ಹಾಕಿದ್ದಾರೆ. ಆ ನಂತರ ಅಂದರೆ ಶನಿವಾರ ರಾತ್ರಿ ಮಹಿಳೆಗೆ ದಂಪತಿ ತಮ್ಮ ಮಗನನ್ನು ಒಪ್ಪಿಸಿದ್ದಾರೆ. ಭಾನುವಾರ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಹಿಳೆಯನ್ನು ಬಂಧಿಸಲಾಯಿತು. ಜೊತೆಗೆ ಮಗುವಿನ ಪೋಷಕರನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.