NationalUncategorized

2 ಅಡಿ ಇರೋದಕ್ಕೆ ಹುಡುಗಿಯರಿಂದ ರಿಜೆಕ್ಟ್- ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕ

– ಯಾರೊಂದಿಗೂ ಜೀವನ ಹಂಚಿಕೊಳ್ಳಬಾರದೆ- ಬೇಸರದಿಂದ ಅಜೀಮ್ ಪ್ರಶ್ನೆ
– ಬಾಳ ಸಂಗಾತಿಗಾಗಿ ಯೋಗಿ ಆದಿತ್ಯನಾಥ್‍ಗೂ ಪತ್ರ ಬರೆದಿರುವ ಅಜೀಮ್

ಲಕ್ನೋ: ಎಷ್ಟು ಹುಡುಕಿದರೂ ವಧು ಸಿಗುತ್ತಿಲ್ಲ. ಪ್ರತಿ ಬಾರಿ ಮನಸ್ಸಿಲ್ಲದ ಮನಸ್ಸಿನಿಂದಲೇ ಹುಡುಗಿ ಹುಡುಕುತ್ತಿದ್ದೇನೆ. ಆದರೂ ಸೆಟ್ ಆಗುತ್ತಿಲ್ಲ. ದಯವಿಟ್ಟು ನಿಮಗೆ ತಿಳಿದಿದ್ದರೆ ವಿವಾಹವಾಗಲು ಹುಡುಗಿ ಹುಡುಕಿ ಕೊಡಿ ಎಂದು ಕೇವಲ 2 ಅಡಿ ಎತ್ತರವಿರುವ ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಪಶ್ಚಿಮ ಉತ್ತರ ಪದೇಶದಲ್ಲಿ ಇಂತಹದ್ದೊಂದು ಘಟನೆ ಬೆಳಕಿಗೆ ಬಂದಿದ್ದು, ಶಾಮ್ಲಿ ಜಿಲ್ಲೆಯ ಕೈರಾನಾ ನಗರದಲ್ಲಿ ಸೌಂದರ್ಯವರ್ಧಕಗಳ ಅಂಗಡಿ ಹೊಂದಿರುವ 26 ವರ್ಷದ ಅಜೀಮ್‍ಗೆ ವಿವಾಹವಾಗಲು ಹುಡುಗಿ ಸಿಗುತ್ತಿಲ್ಲ. ಆರು ಜನ ಸಹೋದರರ ಪೈಕಿ ಇತನೇ ಕೊನೇಯವನಾಗಿದ್ದಾನೆ. ಪ್ರತಿ ಬಾರಿ ಹೆಣ್ಣು ನೋಡಲು ತೆರಳಿದಾಗ ವರ ಕೀಳರಿಮೆಯಿಂದಲೇ ಹುಡುಗಿಯ ಮನೆ ಪ್ರವೇಶಿಸುತ್ತಾನೆ. ಅಲ್ಲದೆ ಹುಡುಗಿ ಸೆಟ್ ಆಗದೆ ನಿರಾಸೆಯಿಂದಲೇ ಹೊರ ಬರುತ್ತಿದ್ದಾನೆ. ಹೀಗಾಗಿ ಬೇಸತ್ತ ಯುವಕ, ವಿವಾಹವಾಗಲು ಹುಡುಗಿ ಹುಡುಕಿ ಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾನೆ.

ಕಳೆದ ಐದು ವರ್ಷದಿಂದ ಹುಡುಗಿ ಹುಡುಕುತ್ತಿದ್ದು, ಅಜೀಮ್ ಕೇವಲ 2 ಅಡಿ ಎತ್ತರ ಇರುವುದರಿಂದಾಗಿ ಯಾವ ಹುಡುಗಿಯೂ ವಿವಾಹವಾಗಲು ಮುಂದೆ ಬರುತ್ತಿಲ್ಲ. ಇದರಿಂದ ಬೇಸತ್ತ ಅಜೀಮ್ ಉತ್ತರ ಪ್ರದೇಶ ಪೊಲೀಸರ ಮೊರೆ ಹೋಗಿದ್ದು, ಸಾರ್ವಜನಿಕ ಸೇವೆ ಮಾಡುತ್ತಿರುವ ನೀವು ನನಗೆ ಬಾಳ ಸಂಗಾತಿಯನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾನೆ.

ಅಜೀಮ್ 21 ವರ್ಷ ಪೂರ್ಣವಾದಾಗಿನಿಂದ ಮನೆಯವರು ಹುಡುಗಿ ಹುಡುಕುತ್ತಿದ್ದಾರೆ. ಆದರೆ 26 ವರ್ಷ ಅಂದರೆ 5 ವರ್ಷಗಳಾದರೂ ಬಾಳ ಸಂಗಾತಿ ಸಿಕ್ಕಿಲ್ಲ. ಇವರ ಅಳಿಯ ಈ ಬಗ್ಗೆ ಮಾತನಾಡಿ ಅಳಲು ತೋಡಿಕೊಂಡಿದ್ದು, ನಾವು ಅವರ ವಿವಾಹ ಮಾಡಲು ಮುಂದಾಗಿದ್ದೇವೆ. ಆದರೆ ಕೇವಲ 2 ಅಡಿ ಎತ್ತರ ಇರುವುದರಿಂದ ವಿವಾಹವಾಗಲು ಯಾರೂ ಮುಂದೆ ಬರುತ್ತಿಲ್ಲ. ಪ್ರತಿ ಸಲ ತಿರಸ್ಕರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾತ್ರಿ ನನಗೆ ನಿದ್ದೆ ಬರುತ್ತಿಲ್ಲ, ತುಂಬಾ ದಿನಗಳಿಂದ ಹುಡುಗಿ ಹುಡುಕುತ್ತಿದ್ದೇನೆ. ನಾನು ಯಾರೊಂದಿಗೂ ಜೀವನ ಹಂಚಿಕೊಳ್ಳಬಾರದೆ ಎಂದು ಅಜೀಮ್ ಬೇಸರದಿಂದ ಪ್ರಶ್ನಿಸಿದ್ದಾನೆ.

ಆರಂಭದಲ್ಲಿ ಅಜೀಮ್ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದಾನೆ. ವಿವಾಹವಾಗಲು ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾನೆ. 8 ತಿಂಗಳ ಬಳಿಕ ಕೈರಾನಾ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್(ಎಸ್‍ಡಿಎಂ) ಭೇಟಿ ಮಾಡಿದ್ದಾನೆ. ಇದೂ ಸಾಲದು ಎಂಬಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಪತ್ರ ಬರೆದಿದ್ದಾನೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ್ದಾನೆ.

ಅಜೀಮ್ ಬುಧವಾರ ನಮ್ಮ ಬಳಿ ಬಂದು ವಧು ಹುಡುಕಿಕೊಡುವಂತೆ ಮನವಿ ಮಾಡಿದ್ದಾನೆ. ಏನು ಮಾಡಬೇಕೆಂದು ನಮಗೇ ತಿಳಿಯುತ್ತಿಲ್ಲ. ಆದರೂ ಇದು ಸಾಧ್ಯವಾಗುತ್ತದೆಯೇ ನೋಡುತ್ತೇವೆ, ಪ್ರಯತ್ನಿಸುತ್ತೇವೆ ಎಂದು ಶಾಮ್ಲಿ ಕೊತ್ವಾಲಿ ಎಸ್‍ಎಚ್‍ಒ ಸತ್ಪಾಲ್ ಸಿಂಗ್ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

Back to top button