– ಗಂಡ ಬದುಕಿದ್ದಾಗಲೇ ಮತ್ತೊಂದು ವಿವಾಹ
ಮೈಸೂರು: ತಾಯಿಯೊಬ್ಬಳು ಹೆತ್ತ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಯಲಕ್ಷ್ಮಿ (6) ತಾಯಿಯಿಂದಲೇ ಹತ್ಯೆಯಾದ ಬಾಲಕಿ. ಆರೋಪಿ ತಾಯಿ ಪವಿತ್ರಾ ಆಕೆಯ ಎರಡನೇ ಪತಿ ಸೂರ್ಯ ಹಾಗೂ ಪವಿತ್ರಾ ತಾಯಿ ಗೌರಮ್ಮ ಸೇರಿ ಕೊಲೆ ಮಾಡಿದ್ದಾರೆ. ಇದೀಗ ಮೇಟಗಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಆರೋಪಿ ಪವಿತ್ರಾ ಎಂಟು ವರ್ಷಗಳ ಹಿಂದೆ ಸಿದ್ದೇಶ್ ಜೊತೆ ಮದುವೆಯಾಗಿದ್ದಳು. ಆದರೆ ಪವಿತ್ರಾ ಮೊದಲ ಪತಿ ಬದುಕಿರುವಾಗಲೇ ಸೂರ್ಯ ಎಂಬಾತನ ಜೊತೆ ಮತ್ತೊಂದು ವಿವಾಹವಾಗಿದ್ದಳು. ಅಲ್ಲದೇ ಮೊದಲ ಪತಿಗೆ ಜನಿಸಿದ ಮಗಳು ಜಯಲಕ್ಷ್ಮಿ ಮೇಲೆ ಪವಿತ್ರಾ ದ್ವೇಷ ಬೆಳೆಸಿಕೊಂಡಿದ್ದಳು. ಇದೇ ಹಿನ್ನೆಲೆಯಲ್ಲಿ ಮಗಳು ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಈ ಕೊಲೆಗೆ ಪವಿತ್ರಾ ಎರಡನೇ ಪತಿ ಸೂರ್ಯ ಹಾಗೂ ತಾಯಿ ಗೌರಮ್ಮ ಸಹಾಯ ಮಾಡಿದ್ದರು.
ಅಷ್ಟೇ ಅಲ್ಲದೇ ಅನುಮಾನ ಬಾರದಂತೆ ಮಗಳ ಅಂತ್ಯ ಸಂಸ್ಕಾರ ಕೂಡ ನೆರವೇರಿಸಿದ್ದಳು. ಮಗಳು ಕಾಣದಿದ್ದಾಗ ಮೊದಲ ಪತಿ ಸಿದ್ದೇಶ್ ಮೇಟಗಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ತಂದೆ ನೀಡಿದ ದೂರಿನ ಮೇರೆಗೆ ಮೇಟಗಳ್ಳಿ ಪೊಲೀಸರು ತನಿಖೆ ನಡೆಸಿದ್ದು, ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಇದು ಅಸಹಜ ಸಾವು ಎಂದು ದೃಢವಾಗಿದೆ. ಎರಡನೇ ಗಂಡನಿಗೆ ಜನಿಸಿದ ಮಗಳ ಮೇಲೆ ಆರೋಪಿ ಪ್ರೀತಿ ಇಟ್ಟುಕೊಂಡಿದ್ದಳು. ಆದರೆ ಮೊದಲ ಪತಿಯ ಮೇಲಿನ ದ್ವೇಷದಿಂದಲೇ ಆರೋಪಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.