– ದುಪ್ಪಟ್ಟು ದರ, ಜನರಿಗೆ ಖಾಸಗಿ ಬಸ್ಸಿನವರ ಶಾಕ್
– ಮಠಗಳಿಗೆ ಕೊಡಲು ದುಡ್ಡೆಲ್ಲಿಂದ ಬಂತು, ಕೋಡಿಹಳ್ಳಿ ಪ್ರಶ್ನೆ
ಬೆಂಗಳೂರು: ಎರಡನೇ ದಿನವೂ ರಾಜ್ಯದಲ್ಲಿ ಬಸ್ ಮುಷ್ಕರ ಮುಂದುವರಿದಿದೆ. ಇಂದು ಕೂಡ ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಬಸ್‍ಗಳು ರಸ್ತೆಗೆ ಇಳಿಯಲ್ಲ. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಗಳು ಖಾಲಿ ಖಾಲಿಯಾಗಿವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‍ಗಳು ಡಿಪೋದಿಂದ ಹೊರಗೆ ಬಂದಿಲ್ಲ. ಹೀಗಾಗಿ ಪ್ರಯಾಣಿಕರೇ 2ನೇ ದಿನವೂ ರಾಜ್ಯದಲ್ಲಿ ಬಸ್ ಸಿಗಲ್ಲ, ಎಚ್ಚರವಾಗಿರಿ.
ಇತ್ತ ಖಾಸಗಿ ಬಸ್‍ಗಳನ್ನು ಓಡಿಸುವ ಸರ್ಕಾರದ ತಂತ್ರ ವಿಫಲವಾಗಿದೆ. ಖಾಸಗಿ ಬಸ್‍ಗಳಿಂದ ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿದ್ದು, ಖಾಸಗಿ ಬಸ್‍ಗಳಿಗಾಗಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಎದುರಾಗಿದೆ. ಸೀಟು ಭರ್ತಿ ಆಗದೇ ಖಾಸಗಿ ಬಸ್‍ನವರು ಗಾಡಿ ಆರಂಭಿಸಲ್ಲ. ಹೀಗಾಗಿ ನಿಗದಿತ ಸಮಯಕ್ಕೆ ತಲುಪಲಾಗದೇ ಪ್ರಯಾಣಿಕರು ಪರದಾಡುತ್ತಿದ್ದು, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಸದ್ಯಕ್ಕೆ ಮುಗಿಯಲ್ವಾ ಬಸ್ ಮುಷ್ಕರ..?
ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಬಸ್ ಮುಷ್ಕರವನ್ನು ತಾತ್ಕಾಲಿಕವಾದರೂ ಶಮನ ಮಾಡುವ ಮನಸ್ಸು ಇದ್ದಂತಿಲ್ಲ. ಅದರ ಬದಲಿಗೆ ಸರ್ಕಾರವೇ ಜಿದ್ದಿಗೆ ಬಿದ್ದಂತೆ ಕಾಣುತ್ತಿದೆ. ಮುಷ್ಕರ ಕೈಬಿಟ್ಟಿಲ್ಲ ಅಂದ್ರೆ ಸಂಬಳ ಸರಿಯಾಗಿ ಸಿಗಲ್ಲ, ಕಠಿಣವಾದ ಕಾನೂನು ಕ್ರಮಕೈಗೊಳ್ಳುತ್ತೇವೆ. ಇಂದು ಮಧ್ಯಾಹ್ನ ಮತ್ತೊಂದು ಸುತ್ತಿನ ಚರ್ಚೆ ನಡೆಸುತ್ತೇವೆ. ಆದರೆ ಆರನೇ ವೇತನ ಆಯೋಗದ ಶಿಫಾರಸು ಅನ್ವಯಿಸಿ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಕಡ್ಡಿಮುರಿದಂತೆ ಹೇಳಿದ್ದಾರೆ.
ಸರ್ಕಾರಕ್ಕೆ ತಿರುಗೇಟು ನೀಡಿರುವ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮಠಕ್ಕೆ ನೂರಾರು ಕೋಟಿ ಕೊಡುವ ಸರ್ಕಾರಕ್ಕೆ ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳಕ್ಕೆ ಏನು ಕಷ್ಟ. ನಾವು ಈಗಲೂ ಸರ್ಕಾರದ ಜೊತೆಗೆ ಮಾತುಕತೆಗೆ ಸಿದ್ಧ ಎಂದಿದ್ದಾರೆ.