ರಾಜೀವ್‌ ಗಾಂಧಿ ಹತ್ಯೆ, ಪಂಜಾಬ್‌ ಹಿಂಸಾಚಾರ… ಸಮಸ್ಯೆಗಳ ಸುಳಿಯಲ್ಲೇ ನಡೆದ 10ನೇ ‘ಲೋಕ’ ಸಮರ

Public TV
4 Min Read
Lok Sabha Elections 1991

– ನಾಲ್ಕು ದಶಕಗಳ ಬಳಿಕ ಕರ್ನಾಟಕದಲ್ಲಿ ಅರಳಿದ ಕಮಲ
– ಮೈಸೂರಲ್ಲಿ ಒಡೆಯರ್‌ ವಿರುದ್ಧ ಗೆದ್ದ ದೇವರಾಜ ಅರಸು ಪುತ್ರಿ

ಪಬ್ಲಿಕ್‌ ಟಿವಿ ವಿಶೇಷ
ಅದು 90 ರ ದಶಕ. ಮಂಡಲ್‌ ಆಯೋಗ ವರದಿ ವಿರುದ್ಧ ಹಿಂಸಾಚಾರ. ಅಯೋಧ್ಯೆ (Ayodhya) ರಾಮಜನ್ಮಭೂಮಿ ವಿವಾದ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ (Rajiv Gandhi) ಹತ್ಯೆ, ಪಂಜಾಬ್‌ ಪ್ರತ್ಯೇಕತಾವಾದಿಗಳ ಹಿಂಸಾಚಾರ.. ಸಾಲು ಸಾಲು ಸಮಸ್ಯೆಗಳ ನಡುವೆಯೇ 10ನೇ ಸಾರ್ವತ್ರಿಕ ಚುನಾವಣೆ ನಡೆಯಿತು.

1990 ರ ಸಂದರ್ಭದಲ್ಲಿ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಜೋರಾಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಎಲ್‌.ಕೆ.ಅಡ್ವಾಣಿ (L.K.Advani) ದೇಶಾದ್ಯಂತ ‘ರಥಯಾತ್ರೆ’ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಲಾಲು ಪ್ರಸಾದ್‌ ಯಾದವ್‌ ಅವರು ಅಡ್ವಾಣಿ ಅವರ ರಥಯಾತ್ರೆಯನ್ನು ತಡೆದರು. ಇದು ಜನತಾ ದಳ ನೇತೃತ್ವದ ಸರ್ಕಾರ ಪತನಕ್ಕೆ ಕಾರಣವಾಯಿತು. ಪ್ರಧಾನಿ ವಿ.ಪಿ.ಸಿಂಗ್‌ ಸರ್ಕಾರ ಕೇವಲ 16 ತಿಂಗಳಿಗೆ ಅಧಿಕಾರ ಕಳೆದುಕೊಂಡಿತು. ದಳದಲ್ಲೇ ಇದ್ದ ಚಂದ್ರಶೇಖರ್‌ ಅವರು ಹೊರಬಂದು ಕಾಂಗ್ರೆಸ್‌ ಬೆಂಬಲದೊಂದಿಗೆ 6-7 ತಿಂಗಳ ಕಾಲ ಪ್ರಧಾನಿಯಾದರು. ಆಗ ಮತ್ತೆ 1991 ರಲ್ಲಿ ಹತ್ತನೇ ಲೋಕಸಭಾ ಚುನಾವಣೆ ನಡೆಯಿತು. ಇದನ್ನೂ ಓದಿ: 1980 ರ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು ಕೇವಲ 4 ದಿನ

rajiv gandhi 3

ಮಂಡಲ್‌-ಮಂದಿರ ಸಮಸ್ಯೆ
ವಿಪಿ ಸಿಂಗ್ ಸರ್ಕಾರವು ಸರ್ಕಾರಿ ಉದ್ಯೋಗಗಳಲ್ಲಿ ಇತರ ಹಿಂದುಳಿದ ಜಾತಿಗಳಿಗೆ (ಒಬಿಸಿ) 27% ರಷ್ಟು ಮೀಸಲಾತಿ ಕಲ್ಪಿಸಿ ಮಂಡಲ್ ಆಯೋಗದ ವರದಿ ಜಾರಿಗೊಳಿಸಿತ್ತು. ಇದು ದೇಶಾದ್ಯಂತ ವ್ಯಾಪಕ ಹಿಂಸಾಚಾರ ಮತ್ತು ಪ್ರತಿಭಟನೆಗಳಿಗೆ ಕಾರಣವಾಯಿತು. ದೆಹಲಿ ಮತ್ತು ಸುತ್ತಮುತ್ತಲಿನ ಅನೇಕ ವಿದ್ಯಾರ್ಥಿಗಳು ಬೆಂಕಿ ಹಚ್ಚಿಕೊಂಡರು.

ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವೂ ಭುಗಿಲೆದ್ದಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರವನ್ನೇ ಬಿಜೆಪಿ ಆಗಿನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿತು. ಮಂದಿರ ವಿಷಯವು ದೇಶದ ಅನೇಕ ಭಾಗಗಳಲ್ಲಿ ಹಲವಾರು ಗಲಭೆಗಳಿಗೆ ಕಾರಣವಾಯಿತು. ಮತದಾರರು ಜಾತಿ ಮತ್ತು ಧಾರ್ಮಿಕ ಆಧಾರದ ಮೇಲೆ ಧ್ರುವೀಕರಣಗೊಂಡರು. ನ್ಯಾಶನಲ್ ಫ್ರಂಟ್ ಛಿದ್ರವಾಗುವುದರೊಂದಿಗೆ, ಕಾಂಗ್ರೆಸ್ (ಐ) ಅತಿ ಹೆಚ್ಚು ಸ್ಥಾನಗಳಿಸಿ, ಅಲ್ಪಸಂಖ್ಯಾತ ಸರ್ಕಾರವನ್ನು ರಚಿಸುವ ಮೂಲಕ ಧ್ರುವೀಕರಣದ ಹೆಚ್ಚಿನ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?

lk advani

ರಾಜೀವ್‌ ಗಾಂಧಿ ಹತ್ಯೆ
1991 ರ ಮೇ 20 ರಂದು ಲೋಕಸಭಾ ಚುನಾವಣೆಯ ಮೊದಲ ಸುತ್ತಿನ ಮತದಾನ ನಡೆಯಿತು. ಅದಾದ ಒಂದು ದಿನದ ನಂತರ ಶ್ರೀಪೆರಂಬದೂರಿನಲ್ಲಿ ಮಾರ್ಗತಮ್ ಚಂದ್ರಶೇಖರ್ ಪರ ಪ್ರಚಾರ ಮಾಡುವಾಗ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು. ಉಳಿದ ಚುನಾವಣಾ ದಿನಗಳನ್ನು ಜೂನ್ ಮಧ್ಯದವರೆಗೆ ಮುಂದೂಡಲಾಯಿತು. ಅಂತಿಮವಾಗಿ ಮತದಾನವು ಜೂನ್ 12 ಮತ್ತು 15 ರಂದು ನಡೆಯಿತು.

ರಾಜೀವ್‌ ಗಾಂಧಿ ಹತ್ಯೆಗೂ ಮುನ್ನ 534 ಕ್ಷೇತ್ರಗಳ ಪೈಕಿ 211 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಅವರ ಹತ್ಯೆಯ ನಂತರ ಉಳಿದ ಕ್ಷೇತ್ರಗಳಿಗೆ ವೋಟಿಂಗ್‌ ಆಯಿತು. ಮೊದಲ ಹಂತದಲ್ಲಿ ಕಾಂಗ್ರೆಸ್ (ಐ) ಬಹುತೇಕ ನಾಶವಾಯಿತು. ಆದರೆ ರಾಜೀವ್‌ ಗಾಂಧಿ ಹತ್ಯೆಯ ನಂತರ ಸಹಾನುಭೂತಿ ಅಲೆ ಕಾಂಗ್ರೆಸ್‌ ಕೈ ಹಿಡಿಯಿತು.

p.v.narasimha rao

27 ದಿನದ ಚುನಾವಣೆ
1991 ರ ಮೇ 20 ರಿಂದ ಜೂನ್‌ 15 ರ ವರೆಗೆ ಮತದಾನ (27 ದಿನ) ನಡೆಯಿತು.

145 ಪಕ್ಷಗಳು
9 ರಾಷ್ಟ್ರೀಯ, 27 ಪ್ರಾದೇಶಿಕ ಪಕ್ಷಗಳು ಸೇರಿದಂತೆ 145 ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.

ಒಟ್ಟು ಕ್ಷೇತ್ರಗಳು: 524‌

ಒಟ್ಟು ಅಭ್ಯರ್ಥಿಗಳು: 8,668
ಮಹಿಳಾ ಅಭ್ಯರ್ಥಿಗಳು: 326 (37)

ಮತದಾರರ ವಿವರ
ಒಟ್ಟು: 49,83,63,801
ಪುರುಷರು: 26,18,32,499
ಮಹಿಳೆಯರು: 23,65,31,302

ಮತದಾನ ಪ್ರಮಾಣ
ವೋಟ್‌ ಮಾಡಿದವರು: 28,27,00,942
ವೋಟಿಂಗ್: 56.73%

bjp flag 2

ಜಮ್ಮು-ಕಾಶ್ಮೀರ, ಪಂಜಾಬ್‌ಗೆ ಇಲ್ಲ ಚುನಾವಣೆ!
ಪ್ರತ್ಯೇಕತಾವಾದಿ ಹಿಂಸಾಚಾರದಿಂದ ನಲುಗಿದ ಪಂಜಾಬ್‌ನಲ್ಲಿ 1991 ರ ಜೂನ್‌ 17 ರಂದು ಬಂದೂಕುಧಾರಿಗಳು ಸುಮಾರು 126 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಪ್ರತ್ಯೇಕ ರೈಲುಗಳಲ್ಲಿ ನಡೆದ ಹತ್ಯೆಯನ್ನು ಸಿಖ್ ಉಗ್ರಗಾಮಿಗಳು ನಡೆಸಿದ್ದರು ಎಂದು ಪೊಲೀಸ್ ವರದಿಗಳು ತಿಳಿಸಿವೆ. ಹಿಂಸಾಚಾರದ ಬೆಳವಣಿಗೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ಚುನಾವಣೆ ನಡೆಯಲಿಲ್ಲ. 1992 ರ ಫೆಬ್ರವರಿ 19 ರಂದು ಪಂಜಾಬ್‌ನಲ್ಲಿ ಚುನಾವಣೆಗಳು ನಡೆದವು. ಆಗ ಕಾಂಗ್ರೆಸ್‌ 13 ರಲ್ಲಿ 12 ಸ್ಥಾನಗಳನ್ನು ಗೆದ್ದಿತು. ಆ ಮೂಲಕ ಲೋಕಸಭೆಯಲ್ಲಿ ತನ್ನ ಸಂಖ್ಯೆಯನ್ನು 232 ರಿಂದ 244 ಕ್ಕೆ ಹೆಚ್ಚಿಸಿಕೊಂಡಿತು. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕಾಂಗ್ರೆಸ್‌ – 232
ಬಿಜೆಪಿ – 120
ಸಿಪಿಐ – 14
ಸಿಪಿಎಂ – 35
ಜನತಾ ದಳ – 59
ಜೆಪಿ – 5
ಇತರೆ – 56

ಮತ್ತೆ ಕಾಂಗ್ರೆಸ್‌ ಸರ್ಕಾರ
10 ನೇ ಸಾರ್ವತ್ರಿಕ ಚುನಾವಣೆಯಲ್ಲಿಯೂ ಯಾವ ಪಕ್ಷಕ್ಕೂ ಜನ ಬಹುಮತ ನೀಡಲಿಲ್ಲ. ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್‌, ಎಡಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ಪಿ.ವಿ.ನರಸಿಂಹ ರಾವ್‌ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

srikantadatta narasimharaja wadiyar chandra prabha

ಕರ್ನಾಟಕದಲ್ಲಿ ಏನಾಗಿತ್ತು?
ಕಾಂಗ್ರೆಸ್‌ – 23
ಬಿಜೆಪಿ – 4
ಜೆಪಿ – 1

ಕರುನಾಡಲ್ಲಿ ಅರಳಿದ ಕಮಲ
ಕರ್ನಾಟಕದ ಲೋಕಸಭಾ ಚುನಾವಣಾ ಇತಿಹಾಸದಲ್ಲಿ 1991 ರಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಕಮಲವನ್ನು ಅರಳಿಸಿತು. ಬೆಂಗಳೂರು ಗ್ರಾಮಾಂತರದಿಂದ ವೆಂಕಟಗಿರಿ ಗೌಡ, ಬೀದರ್‌ – ರಾಮಚಂದ್ರ ವೀರಪ್ಪ, ಮಂಗಳೂರು – ವಿ.ಧನಂಜಯ ಕುಮಾರ್‌, ತುಮಕೂರು – ಮಲ್ಲಿಕಾರ್ಜುನಯ್ಯ ಗೆಲುವು ದಾಖಲಿಸಿದರು. ಇದನ್ನೂ ಓದಿ: ಕೇವಲ 5 ದಿನದ ಚುನಾವಣೆ; ಕಾಂಗ್ರೆಸ್‌ ಕುಸಿದರೂ ಗೆದ್ದ ಇಂದಿರಾ

ಒಡೆಯರ್ vs ಅರಸು‌
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ (Congress) ತೊರೆದಿದ್ದ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ (Srikantadatta Nrasimharaja Wadiyar) 1991 ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು (Chandraprabha Urs) ವಿರುದ್ಧ ಸ್ಪರ್ಧಿಸಿ ಒಡೆಯರ್‌ ಸೋತಿದ್ದರು. ಈ ಕ್ಷೇತ್ರದಲ್ಲಿ ಗೆದ್ದಿದ್ದ ಏಕೈಕ ಮಹಿಳೆ ಎನ್ನುವ ಹೆಗ್ಗಳಿಕೆ ಈವರೆಗೂ ಚಂದ್ರಪ್ರಭಾ ಅರಸು ಅವರ ಹೆಸರಲ್ಲಿಯೇ ಇದೆ.

Share This Article