ಹಮಾಸ್ ಜೊತೆಗಿನ ಯುದ್ಧದ ಬಳಿಕ ಈಗ ಹಿಜ್ಬುಲ್ಲಾ (Hezbollah) ಬಂಡುಕೋರರ ಗುಂಪಿನ ಜೊತೆಗೆ ಇಸ್ರೇಲ್ (Israel) ಸಂಘರ್ಷಕ್ಕೆ ಇಳಿದಿದೆ. ಹಮಾಸ್, ಕಳೆದ ವರ್ಷ ಅಕ್ಟೋಬರ್ 7 ರಂದು ಗಾಜಾ ಪಟ್ಟಿಯ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಪರಿಸ್ಥಿತಿ ಭೀಕರ ಸ್ವರೂಪ ಪಡೆಯಿತು. ಇಬ್ಬರು ಶತ್ರುಗಳ ದಾಳಿ-ಪ್ರತಿದಾಳಿಯಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಬಲಿಯಾದರು. ದಾಳಿಗೆ ತುತ್ತಾದವರ ಬದುಕು ಬೀದಿಪಾಲಾಯಿತು. ಹಮಾಸ್ ನಡೆಸಿದ ಆ ಒಂದು ದಾಳಿಯಿಂದಾಗಿ ಅದರ ಮಿತ್ರ ಸಂಘಟನೆಗಳ ವಿರುದ್ಧ ಇಸ್ರೇಲ್ ಸೇಡು ತೀರಿಸಿಕೊಳ್ಳುವಂತಹ ಘೋರ ವಾತಾವರಣ ಸೃಷ್ಟಿಯಾಗಿದೆ. ಅದರ ನಿದರ್ಶನವೆಂಬಂತೆ ಹಿಜ್ಬುಲ್ಲಾ ವರ್ಸಸ್ ಇಸ್ರೇಲ್ ಸಂಘರ್ಷ ಮತ್ತೆ ಶುರುವಾಗಿದೆ.
ಸೋಮವಾರ ಲೆಬನಾನ್‌ನಲ್ಲಿ (Lebanon) ಇಸ್ರೇಲಿ ವೈಮಾನಿಕ ದಾಳಿಯಲ್ಲಿ 35 ಮಕ್ಕಳು ಸೇರಿದಂತೆ ಕನಿಷ್ಠ 492 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಬಿಟ್ಟರೇ ಅತ್ಯಂತ ಭೀಕರ ಮಾರಣಾಂತರ ದಾಳಿಯಾಗಿದೆ ಇದಾಗಿದೆ. ಲೆಬನಾನಿನ ಸಾವಿರಾರು ಕುಟುಂಬಗಳು ಸ್ಥಳಾಂತರಗೊಂಡಿವೆ. ಆದರೂ ಇವರಿಬ್ಬರ ನಡುವಿನ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ವೈರತ್ವ ಹೆಚ್ಚಾಗಿದ್ದು, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಇದನ್ನೂ ಓದಿ: ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ವಾಯು ದಾಳಿ – ಉಗ್ರರ ಮುಖ್ಯಸ್ಥನೇ ಇಸ್ರೇಲ್ ಗುರಿ
Advertisement
Advertisement
ಹಿಜ್ಬುಲ್ಲಾ ಮೇಲೆ ದಾಳಿಯೇಕೆ?
ಹಿಜ್ಬುಲ್ಲಾ, ಲೆಬನಾನ್‌ನಲ್ಲಿ ಪ್ರಾಬಲ್ಯ ಮತ್ತು ಪ್ರಭಾವ ಹೊಂದಿರುವ ಶಿಯಾ ಮುಸ್ಲಿಮರ ಸಂಘಟನೆ. ಇಸ್ರೇಲ್ ವಿರೋಧಿ ಇರಾನ್‌ನೊಂದಿಗೆ ಈ ಸಂಘಟನೆ ಉತ್ತಮ ಬಾಂಧವ್ಯ ಹೊಂದಿದೆ. ಇದು ಸಹಜವಾಗಿಯೇ ಇಸ್ರೇಲ್ ಸಿಟ್ಟಿಗೆ ಕಾರಣವಾಗಿದೆ. ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಯು, ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ವೈರತ್ವದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಿತು. ಈಗ ಇವರಿಬ್ಬರ ತಿಕ್ಕಾಟ ಉಲ್ಬಣಗೊಂಡಿದೆ. ಇರಾನ್ ಬೆಂಬಲಿತ, ಲೆಬನಾನ್ ಮೂಲದ ಗುಂಪು ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹೊಸದೇನಲ್ಲ. ಇವರಿಬ್ಬರು ನಾಲ್ಕು ದಶಕಗಳ ರಕ್ತಸಿಕ್ತ ಇತಿಹಾಸವನ್ನು ಹಂಚಿಕೊಂಡಿದ್ದಾರೆ. ಅದೇನು ಅಂತಾ ಇಲ್ಲಿ ವಿವರವಾಗಿ ತಿಳಿಯಿರಿ.
Advertisement
ಇಸ್ರೇಲ್‌ನ 1982ರ ಆಕ್ರಮಣ ಮತ್ತು ಹಿಜ್ಬುಲ್ಲಾ ಹುಟ್ಟು!
ದಕ್ಷಿಣದಲ್ಲಿ ಸಕ್ರಿಯವಾಗಿದ್ದ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್‌ಒ) ದಾಳಿಗೆ ಪ್ರತಿಯಾಗಿ ಇಸ್ರೇಲ್ ಲೆಬನಾನ್ ಅನ್ನು ಆಕ್ರಮಿಸಿದಾಗ ಹಿಜ್ಬುಲ್ಲಾ (ಜೂನ್, 1982) ಉದಯಿಸಿತು. ಇದರ ರಕ್ತಸಿಕ್ತ ಚರಿತ್ರೆ ಅಲ್ಲಿಂದ ಶುರುವಾಯಿತು. ಆಗಿನ ಸಂದರ್ಭದಲ್ಲಿ ಇಸ್ರೇಲ್‌ನ ಆಕ್ರಮಣವು ಬೈರುತ್‌ನ ಹೃದಯ ಭಾಗ ತಲುಪಿತು. ಈ ಸಂದರ್ಭದಲ್ಲಾದ ಸಬ್ರಾ ಮತ್ತು ಶಟಿಲಾ ಹತ್ಯಾಕಾಂಡದಲ್ಲಿ 2,000 ರಿಂದ 3,500 ಪ್ಯಾಲೇಸ್ತೀನಿಯನ್ ನಿರಾಶ್ರಿತರು ಮತ್ತು ಲೆಬನಾನಿನ ನಾಗರಿಕರು ಕೊಲ್ಲಲ್ಪಟ್ಟರು. ಆ ಮೂಲಕ ಪ್ರತಿರೋಧದ ಬೀಜಗಳನ್ನು ಬಿತ್ತಿದರು. ಇಸ್ರೇಲ್‌ಗೆ ಕೌಂಟರ್ ಆಗಿ ಬೆಳೆದ ಗುಂಪುಗಳಲ್ಲಿ ಹಿಜ್ಬುಲ್ಲಾ ಕೂಡ ಒಂದು. ಇದನ್ನು ಆರಂಭದಲ್ಲಿ ಇರಾನ್ ಬೆಂಬಲದೊಂದಿಗೆ ಶಿಯಾ ಮುಸ್ಲಿಂ ನಾಯಕರು ರಚಿಸಿದರು. ಹಿಜ್ಬುಲ್ಲಾ ಶೀಘ್ರವಾಗಿ ಪ್ರಬಲ ಸೇನಾಪಡೆಯಾಗಿ ಮಾರ್ಪಟ್ಟಿತು. ಇಸ್ರೇಲ್ ವಿರುದ್ಧ ಅಸಮಾಧಾನಗೊಂಡಿದ್ದ ಬೈರುತ್‌ನ ದಕ್ಷಿಣ ಉಪನಗರಗಳು ಮತ್ತು ಬೆಕಾ ಕಣಿವೆಯ ಯುವಜನರು ಹೆಚ್ಚೆಚ್ಚು ಈ ಗುಂಪು ಸೇರಿದರು.
Advertisement
1983-1985: ರಕ್ತಪಾತ ಮತ್ತು ಪ್ರತಿರೋಧ
1982 ಮತ್ತು 1986 ರ ನಡುವೆ, ಲೆಬನಾನ್‌ನಲ್ಲಿ ವಿದೇಶಿ ಪಡೆಗಳ ಮೇಲೆ ಹಲವಾರು ದಾಳಿಗಳು ನಡೆದವು. ಹಿಜ್ಬುಲ್ಲಾ ಅಥವಾ ಅದಕ್ಕೆ ಸಂಬಂಧಿಸಿದ ಗುಂಪುಗಳು ಈ ದಾಳಿ ನಡೆಸಿವೆ ಎಂಬ ಆರೋಪ ಕೇಳಿಬಂದಿತ್ತು. ಬೈರುತ್‌ನಲ್ಲಿನ ಫ್ರೆಂಚ್ ಮತ್ತು ಅಮೆರಿಕನ್ ಮಿಲಿಟರಿ ಬ್ಯಾರಕ್‌ಗಳ ಮೇಲೆ 1983 ರ ಅಕ್ಟೋಬರ್‌ನಲ್ಲಿ ನಡೆದ ಬಾಂಬ್ ದಾಳಿಯು 300 ಕ್ಕೂ ಹೆಚ್ಚು ಶಾಂತಿಪಾಲಕರನ್ನು ಕೊಂದಿತು. ಈ ದಾಳಿಯ ಹಿಂದೆ ಹಿಜ್ಬುಲ್ಲಾ ಇದೆ ಎಂದೇ ಭಾವಿಸಲಾಯಿತು. 1985ರ ಹೊತ್ತಿಗೆ, ದಕ್ಷಿಣ ಲೆಬನಾನ್‌ನ ಹೆಚ್ಚಿನ ಭಾಗದಿಂದ ಇಸ್ರೇಲ್ ತನ್ನ ಮಿಲಿಟರಿಯನ್ನು ಹಂತೆಗೆದುಕೊಳ್ಳುವಷ್ಟರ ಮಟ್ಟಿಗೆ ಹಿಜ್ಬುಲ್ಲಾ ಬಲವಾಗಿ ಬೆಳೆಯಿತು. ಆದರೂ ಇಸ್ರೇಲ್ ಗಡಿಯುದ್ದಕ್ಕೂ ‘ಭದ್ರತಾ ವಲಯ’ವನ್ನು ನಿರ್ವಹಿಸಿತು. ಇದನ್ನೂ ಓದಿ: ಅಮೆರಿಕದಲ್ಲಿ ಹೆಲೆನ್ ಚಂಡಮಾರುತದ ಆರ್ಭಟ – 33 ಮಂದಿ ಸಾವು
1992-1996: ರಾಜಕೀಯವಾಗಿ ಬೆಳೆದ ಹಿಜ್ಬುಲ್ಲಾ
ಮಿಲಿಟರಿ ವಲಯದಲ್ಲಿ ಬೆಳೆದ ಹಿಜ್ಬುಲ್ಲಾ ಬಳಿಕ ರಾಜಕೀಯ ರಂಗ ಪ್ರವೇಶಿಸಿತು. 1992 ರಲ್ಲಿ ಲೆಬನಾನ್‌ನ ಅಂತರ್ಯದ್ಧದ ಅಂತ್ಯದ ನಂತರ, ಲೆಬನಾನ್‌ನ 128 ಸದಸ್ಯ ಬಲದ ಸಂಸತ್ತಿನಲ್ಲಿ ಎಂಟು ಸ್ಥಾನಗಳನ್ನು ಗೆದ್ದ ಹಿಜ್ಬುಲ್ಲಾ ರಾಜಕೀಯ ಆಟಗಾರನಾಗಿ ಪರಿವರ್ತನೆಗೊಂಡಿತು. ಬರಬರುತ್ತಾ ಹಿಜ್ಬುಲ್ಲಾ ಪ್ರಭಾವವು ರಾಜಕೀಯ ಮತ್ತು ಮಿಲಿಟರಿ ವಲಯದಲ್ಲಿ ವಿಸ್ತರಿಸಿತು. ಶಿಯಾ ಪ್ರಾಬಲ್ಯದ ಪ್ರದೇಶಗಳಲ್ಲಿ ವ್ಯಾಪಕ ಸಾಮಾಜಿಕ ಸೇವೆಯೂ ಇದರಿಂದ ಸಾಧ್ಯವಾಯಿತು. ಅದೇ ಸಮಯದಲ್ಲಿ ಇಸ್ರೇಲಿ ಪಡೆಗಳ ವಿರುದ್ಧ ಹಿಜ್ಬುಲ್ಲಾ ಪ್ರತಿರೋಧ ಮುಂದುವರಿಯಿತು.
1993 ರಲ್ಲಿ ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿತು. ಅದಕ್ಕೆ ಪ್ರತೀಕಾರವಾಗಿ ಇಸ್ರೇಲ್ ‘ಆಪರೇಷನ್ ಅಕೌಂಟಿಬಿಲಿಟಿ’ಯನ್ನು ಪ್ರಾರಂಭಿಸಿತು. ಇದು ತೀವ್ರವಾದ ಸಂಘರ್ಷಕ್ಕೆ ಕಾರಣವಾಯಿತು. ಪ್ರತಿದಾಳಿಗೆ ಲೆಬನಾನ್‌ನ 118 ನಾಗರಿಕರು ಬಲಿಯಾದರು. 1996 ರಲ್ಲಿ ‘ಆಪರೇಷನ್ ಗ್ರೇಪ್ಸ್ ಆಫ್ ಕ್ರೋತ್’ ದಾಳಿಯನ್ನೂ ಇಸ್ರೇಲ್ ನಡೆಸಿತು. ಹಿಜ್ಬುಲ್ಲಾವನ್ನು ಹಿಮ್ಮೆಟ್ಟಿಸುವುದೇ ಇಸ್ರೇಲ್‌ನ ಮುಖ್ಯ ಉದ್ದೇಶವಾಗಿತ್ತು.
2000-2006: ಹಿಂದೆ ಸರಿದ ಇಸ್ರೇಲ್, ಜುಲೈ ಯುದ್ಧ
2000ರ ಮೇ ನಲ್ಲಿ ಇಸ್ರೇಲ್ ಸುಮಾರು ಎರಡು ದಶಕಗಳ ಆಕ್ರಮಣದ ನಂತರ ದಕ್ಷಿಣ ಲೆಬನಾನ್‌ನಿಂದ ಏಕಪಕ್ಷೀಯವಾಗಿ ಹಿಂತೆಗೆದುಕೊಂಡಿತು. ಹಿಜ್ಬುಲ್ಲಾದಿಂದ ಹೆಚ್ಚಿದ ಪ್ರತಿರೋಧದ ಕಾರಣಕ್ಕೆ ಈ ಕ್ರಮ ಕೈಗೊಂಡಿತು. ಈ ವಿಜಯವು ಹಿಜ್ಬುಲ್ಲಾದ ಸ್ಥಾನಮಾನವನ್ನು ಕೇವಲ ಸೇನಾಪಡೆಯಾಗಿ ಮಾತ್ರವಲ್ಲದೆ ಲೆಬನಾನ್‌ನೊಳಗೆ ಅಸಾಧಾರಣ ರಾಜಕೀಯ ಶಕ್ತಿಯಾಗಿ ಮತ್ತು ಇಸ್ರೇಲ್ ವಿರುದ್ಧ ಅರಬ್ ಪ್ರತಿರೋಧದ ಸಂಕೇತವಾಗಿ ಗಟ್ಟಿಗೊಳಿಸಿತು. 2006 ರಲ್ಲಿ, ಹಿಜ್ಬುಲ್ಲಾ ಸಂಘಟನೆಯು ಇಬ್ಬರು ಇಸ್ರೇಲಿ ಸೈನಿಕರನ್ನು ವಶಪಡಿಸಿಕೊಂಡಿತು. ಆಗ ಇಬ್ಬರ ನಡುವೆ ಕುದಿಯುತ್ತಿದ್ದ ಉದ್ವಿಗ್ನತೆಯು ಜುಲೈ ಯುದ್ಧಕ್ಕೆ ಕಾರಣವಾಯಿತು. 34 ದಿನಗಳ ಕಾಲ ನಡೆದ ಈ ಸಂಘರ್ಷವು ಅಪಾರ ಸಾವುನೋವುಗಳಿಗೆ ಕಾರಣವಾಯಿತು 1,200 ಲೆಬನೀಸ್ ಮತ್ತು 158 ಇಸ್ರೇಲಿಗಳ ಸಾವಿಗೆ ಈ ಯುದ್ಧ ಕಾರಣವಾಯಿತು.
2009-2024: ಪ್ರಾದೇಶಿಕ ಸಂಘರ್ಷ
2009 ರ ಹೊತ್ತಿಗೆ ಹಿಜ್ಬುಲ್ಲಾ ಕೇವಲ ಮಿಲಿಟಿಯಾ ಅಥವಾ ಪ್ರತಿರೋಧ ಚಳುವಳಿಗೆ ಸೀಮಿತವಾಗದೇ, ಲೆಬನಾನ್‌ನಲ್ಲಿ ಪ್ರಬಲ ಮಿಲಿಟರಿ ಮತ್ತು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತು. ಸಿರಿಯಾದ ಅಂತರ್ಯುದ್ಧದ ಸಮಯದಲ್ಲಿ ತನ್ನ ಶಕ್ತಿಯನ್ನು ಮತ್ತಷ್ಟು ಪ್ರದರ್ಶಿಸಿತು. 2012 ರ ಆರಂಭದಲ್ಲಿ ಅಸ್ಸಾದ್ ಆಡಳಿತದ ಪರವಾಗಿ ಹಿಜ್ಬುಲ್ಲಾ ಮಧ್ಯಪ್ರವೇಶಿಸಿತು. ಪರಿಣಾಮವಾಗಿ ಅರಬ್ಬರಲ್ಲಿ ಸ್ವಲ್ಪ ಬೆಂಬಲವನ್ನು ಕಳೆದುಕೊಂಡಿತು. ಆದರೆ ಇರಾನ್‌ನೊಂದಿಗೆ ಅದರ ಮೈತ್ರಿಯನ್ನು ಗಟ್ಟಿಗೊಳಿಸಿತು. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ
ಲೆಬನಾನ್ ಬೆಚ್ಚಿ ಬೀಳಿಸಿದ ಪೇಜರ್ ಸ್ಫೋಟ
2023 ರ ಗಾಜಾ ಯುದ್ಧವು ಹಿಜ್ಬುಲ್ಲಾವನ್ನು ಇಸ್ರೇಲ್‌ನೊಂದಿಗೆ ನೇರ ಮುಖಾಮುಖಿಯಾಗುವಂತೆ ಮಾಡಿತು. 2023ರ ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ಅಭೂತಪೂರ್ವ ದಾಳಿಯನ್ನು ಪ್ರಾರಂಭಿಸಿತು. ಈ ಸಂಘರ್ಷವನ್ನು ಹಿಜ್ಬುಲ್ಲಾ ಮತ್ತಷ್ಟು ಹೆಚ್ಚಿಸಿತು. ಲೆಬನಾನ್‌ನಿಂದ ರಾಕೆಟ್ ದಾಳಿಗಳನ್ನು ಪ್ರಾರಂಭಿಸಿತು. ಅದಕ್ಕೆ ಪ್ರತೀಕಾರದ ದಾಳಿಗಳನ್ನು ಈಗ ಅನುಭವಿಸುತ್ತಿದೆ. ಲೆಬನಾನ್‌ನ ಬೈರುತ್ ನಗರ, ಬೆಕ್ಕಾ ಕಣಿವೆ, ಸಿರಿಯಾ ದೇಶದ ಡಮಾಸ್ಕಸ್ ಸೇರಿ ಹಲವೆಡೆ ನೂರಾರು ಪೇಜರ್‌ಗಳು ಸ್ಫೋಟಗೊಂಡು ಹತ್ತಾರು ಜನ ಸಾವಿಗೀಡಾದರು. ಸಾವಿರಾರು ಮಂದಿ ಆಸ್ಪತ್ರೆ ಸೇರಿದರು. ಹಿಜ್ಬುಲ್ಲಾ ಸಂಘಟನೆ ಗುರಿಯಾಗಿಸಿ ಇಸ್ರೇಲ್ ಈ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಮೊಬೈಲ್ ಯುಗದಲ್ಲಿ ನಡೆದ ಈ ದಾಳಿ ಇಡೀ ಜಗತ್ತೇ ಹುಬ್ಬೇರಿಸುವಂತೆ ಮಾಡಿದೆ. ಪೇಜರ್ ಸ್ಫೋಟಗೊಂಡಿದ್ದು ಹೇಗೆಂಬ ಪ್ರಶ್ನೆ ಹಿಜ್ಬುಲ್ಲಾ ಸಂಘಟನೆಯನ್ನು ಕಾಡುತ್ತಿದೆ. ಈ ದಾಳಿಯ ಪರಿಣಾಮವನ್ನು ಇಸ್ರೇಲ್ ಎದುರಿಸಲಿದೆ ಎಂದು ಹಿಜ್ಬುಲ್ಲಾ ಸಾರಿ ಹೇಳಿತು. ಇದರ ಬೆನ್ನಲ್ಲೇ ಇಸ್ರೇಲ್ ಲೆಬನಾನ್ ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಿದ್ದು, ಹಿಜ್ಬುಲ್ಲಾ ಸದಸ್ಯರ ಹತ್ಯೆ ಮಾಡುತ್ತಿದೆ.