– ಕಾಂಗ್ರೆಸ್ಸೇತರ ಸರ್ಕಾರಕ್ಕೆ ಕೈ ಕೊಟ್ಟ ಜನ
– ಇಂದಿರಾ ಗಾಂಧಿಗೆ ಇದು ಕೊನೆ ಚುನಾವಣೆ
ಪಬ್ಲಿಕ್ ಟಿವಿ ವಿಶೇಷ
ಜನತಂತ್ರ ಅಥವಾ ಸರ್ವಾಧಿಕಾರ ಎಂಬ ಸೈದ್ಧಾಂತಿಕ ನೆಲೆಯಲ್ಲಿ ಚುನಾವಣೆ ಎದುರಿಸಿ 1977 ರಲ್ಲಿ ಗೆದ್ದ ಇತಿಹಾಸ ಬರೆದಿದ್ದ ಜನತಾ ಪರಿಹಾರ ಭಿನ್ನಾಭಿಪ್ರಾಯಗಳಿಂದ ಒಡೆದ ಮನೆಯಾಯಿತು. ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ಒಂದಾಗಿ ಸರ್ಕಾರ ರಚಿಸಿದ್ದ ಒಕ್ಕೂಟ ಕನ್ನಡಿಯಂತೆ ಒಡೆದು ಚೂರಾಯಿತು. ಇದರಿಂದ ಕಾಂಗ್ರೆಸ್ಸೇತರ ಮೊದಲ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ (Morarji Desai) ಅನಿವಾರ್ಯವಾಗಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಬಳಿಕ ಕಾಂಗ್ರೆಸ್ (Congress) ಬೆಂಬಲದೊಂದಿಗೆ ಚರಣ್ ಸಿಂಗ್ ದೇಶದ ಪ್ರಧಾನಿಯಾದರು. ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದ್ದ ಎರಡು ದಿನಕ್ಕೂ ಮುಂಚೆ ಕಾಂಗ್ರೆಸ್ ನೀಡಿದ್ದ ಬೆಂಬಲದಿಂದ ಹಿಂದೆ ಸರಿಯಿತು. ಇದರಿಂದ ಚರಣ್ ಸಿಂಗ್ ಕೂಡ ರಾಜೀನಾಮೆಗೆ ಒತ್ತಾಯಿಸಲ್ಪಟ್ಟರು. 1980 ರ ಜನವರಿಯಲ್ಲಿ (1980 Lok Sabha Elections) ಚುನಾವಣೆಗೆ ಕರೆ ನೀಡಿದರು.
Advertisement
ಸರ್ವಾಧಿಕಾರ ಹಾಗೂ ಕಾಂಗ್ರೆಸ್ ವಿರೋಧಿ ಹೋರಾಟ, ಸಂವಿಧಾನ ರಕ್ಷಣೆ, ಪ್ರಜಾತಂತ್ರ ಹೆಸರಿನಲ್ಲಿ ನಡೆದಿದ್ದ 1977 ರ ಚುನಾವಣೆ ಭಾರತದಲ್ಲಿ ಬದಲಾವಣೆಯೊಂದಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಿತು. ಆದರೆ ಅಂಥ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ಸೇತರ ಮೈತ್ರಿ ನಾಯಕರು ವಿಫಲರಾದರು. ಕಾಂಗ್ರೆಸ್‌ಗೆ ಪರ್ಯಾಯ ರಾಜಕಾರಣ ಕನಸು ಕಂಡು ಒಂದು ಹಂತದಲ್ಲಿ ಯಶಸ್ವಿಯೂ ಆಗಿದ್ದ ಜನತಾ ಪಕ್ಷ ಅಧಿಕಾರಕ್ಕಾಗಿ ನಾಯಕರ ಕಿತ್ತಾಟದಿಂದ ಇಬ್ಭಾಗವಾಯಿತು. ನಾಯಕರ ರಾಜಕೀಯ ನಡೆಯಿಂದ ಜನ ಬೇಸತ್ತರು. ತುರ್ತು ಪರಿಸ್ಥಿತಿ ವಿರೋಧಿಸಿ ಮತ ನೀಡಿದ್ದ ಭಾರತೀಯರು ಮತ್ತೆ ಕೈ ಹಿಡಿದರು. ಇಂದಿರಾ ಗಾಂಧಿ (Indira Gandhi) ಅವರನ್ನೇ 1980 ರಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ತಂದರು. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?
Advertisement
Advertisement
ಸಂಸತ್ತಿನ ವಿಶ್ವಾಸ ಪಡೆಯದ ಏಕೈಕ ಪ್ರಧಾನಿ
ಮೊರಾರ್ಜಿ ದೇಸಾಯಿ ಬಳಿಕ ಕಾಂಗ್ರೆಸ್ಸೇತರ ಸರ್ಕಾರದ ಎರಡನೇ ಹಾಗೂ ದೇಶದ ಆರನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರು ಚರಣ್ ಸಿಂಗ್. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ 1977 ರ ಜುಲೈ 28 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು ಅಲ್ಪಾವಧಿಗೆ ಮಾತ್ರ. ಕಾಂಗ್ರೆಸ್ ಬೆಂಬಲ ಹಿಂಪಡೆದ ಕಾರಣ 1979 ರ ಆಗಸ್ಟ್ 20 ರಂದು ರಾಜೀನಾಮೆ ನೀಡಿದರು. ನಂತರ 1980 ರ ಜನವರಿ 14 ರ ವರೆಗೆ ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಸಂಸತ್‌ನಲ್ಲಿ ವಿಶ್ವಾಸಮತ ಪಡೆಯಲಾಗದೇ ಅಧಿಕಾರದಿಂದ ಕೆಳಗಿಳಿದ ಏಕೈಕ ಪ್ರಧಾನಿ ಚರಣ್ ಸಿಂಗ್.
Advertisement
4 ದಿನದ ಚುನಾವಣೆ
ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ನಡೆದ ಚುನಾವಣೆಯೆಂದರೆ ಅದು 7ನೇ ಸಾರ್ವತ್ರಿಕ ಚುನಾವಣೆ. 1980 ರ ಚುನಾವಣೆ 4 ನಾಲ್ಕು ದಿನ ಮಾತ್ರ ನಡೆಯಿತು. ಜನವರಿಂದ 3 ರಿಂದ 6 ರ ವರೆಗೆ ಮತದಾನ ನಡೆಯಿತು.
36 ಪಕ್ಷಗಳು ಸ್ಪರ್ಧೆ
ರಾಷ್ಟ್ರೀಯ ಪಕ್ಷಗಳು 6, ಪ್ರಾದೇಶಿಕ ಪಕ್ಷಗಳು 19 ಸೇರಿ ಒಟ್ಟು 36 ಪಕ್ಷಗಳು ಚುನಾವಣಾ ಕಣದಲ್ಲಿದ್ದವು. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!
4,629 ಅಭ್ಯರ್ಥಿಗಳು ಕಣಕ್ಕೆ
542 ಕ್ಷೇತ್ರಗಳಿಗೆ ಒಟ್ಟು 4,629 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ 4,486 ಪುರುಷರು ಹಾಗೂ 143 ಮಹಿಳಾ ಅಭ್ಯರ್ಥಿಗಳಿದ್ದರು.
35 ಕೋಟಿ ಮತದಾರರು
1980 ರ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 35,62,05,329 ಮತದಾರರಿದ್ದರು. ಅವರಲ್ಲಿ 20,27,52,893 ಮಂದಿ ಮತದಾರರು ಹಕ್ಕು ಚಲಾಯಿಸಿದರು. 56.9% ನಷ್ಟು ಮತ ಚಲಾವಣೆಯಾಗಿತ್ತು.
ಮತ್ತೆ ಇಂದಿರಾ ಅಧಿಕಾರಕ್ಕೆ
ತುರ್ತು ಪರಿಸ್ಥಿತಿ ಎಫೆಕ್ಟ್‌ನಿಂದ ಅಧಿಕಾರ ಕಳೆದುಕೊಂಡಿದ್ದ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ (ಐ) ಸರ್ಕಾರ 1980 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್ (ಐ) 353, ಜನತಾ ಪಕ್ಷ (ಸೆಕ್ಯುಲರ್) 41, ಸಿಪಿಎಂ 37, ಜನತಾ ಪಕ್ಷ 31, ಡಿಎಂಕೆ 16, ಇತರೆ 42 ಹಾಗೂ ಪಕ್ಷೇತರರು 9 ಸ್ಥಾನ ಗೆದ್ದರು.
ಕರ್ನಾಟಕ ಫಲಿತಾಂಶ ಏನಾಗಿತ್ತು?
ಕಾಂಗ್ರೆಸ್ (ಐ) ಕರ್ನಾಟಕದಲ್ಲಿ 27 ಸ್ಥಾನಗಳಲ್ಲಿ ಜಯ ಗಳಿಸಿತು. ಜನತಾ ಪಕ್ಷ ಕೇವಲ 1 ಸ್ಥಾನದಲ್ಲಿ ಮಾತ್ರ ಗೆಲುವು ದಾಖಲಿಸಿತು. ಇದನ್ನೂ ಓದಿ: ಲೋಕಸಭೆ ಚುನಾವಣೆಗಳು ಭಾರತದಲ್ಲಿ ನಡೆದಿದ್ದೆಷ್ಟು ದಿನ..?
ಇಂದಿರಾ ಗಾಂಧಿ ಹತ್ಯೆ
ನಾಲ್ಕನೇ ಬಾರಿಗೆ ಪ್ರಧಾನಿಯಾಗಿ 1980 ರ ಜನವರಿ 14 ರಂದು ಇಂದಿರಾ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರು. 1984, ಅಕ್ಟೋಬರ್ 31 ರಲ್ಲಿ ಹತ್ಯೆಗೆ ಈಡಾಗುವವರೆಗೂ ಅದೇ ಸ್ಥಾನದಲ್ಲಿದ್ದರು. ಭಾರತದ ಏಕೈಕ ಮಹಿಳಾ ಪ್ರಧಾನಿ ಹಾಗೂ ವಿಶ್ವದಲ್ಲೇ ಸುದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮಹಿಳಾ ಎಂಬ ಹೆಗ್ಗಳಿಕೆ ಅವರದ್ದು.