– ದೇಶದ ನಾಲ್ಕನೇ ಲೋಕಸಭಾ ಚುನಾವಣೆಯಲ್ಲಿ ಏನಾಯ್ತು?
– ಹಿಂದಿ ವಿರೋಧಿ ಹೋರಾಟಕ್ಕೆ ತಮಿಳುನಾಡಿನಲ್ಲಿ ನೆಲಕಚ್ಚಿದ ಕಾಂಗ್ರೆಸ್
– ಪಬ್ಲಿಕ್ ಟಿವಿ ವಿಶೇಷ
ಭಾರತವು ನಾಲ್ಕನೇ ಲೋಕಸಭಾ ಚುನಾವಣೆಗೂ (Lok Sabha Elections 2024) ಮುನ್ನ ಹಲವಾರು ಸವಾಲುಗಳನ್ನು ಎದುರಿಸಿತು. ಎರಡು ಯುದ್ಧ, ಇಬ್ಬರು ಪ್ರಧಾನಿಗಳ ನಿಧನ, ಆರ್ಥಿಕ ಬಿಕ್ಕಟ್ಟು, ಆಹಾರದ ಅಭಾವ, ಆಡಳಿತ ವಿರೋಧಿ ಅಲೆಯ ನಡುವೆ 1967 ರ ಸಾರ್ವತ್ರಿಕ ಚುನಾವಣೆ ಎದುರಿಸುವುದು ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿತ್ತು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ಇಂದಿರಾ ಗಾಂಧಿ (Indira Gandhi) ಅವರು ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದರು.
Advertisement
1967 ರ ಚುನಾವಣೆಗೂ ಮುನ್ನ ಏನಾಗಿತ್ತು?
ಗಡಿ ವಿವಾದ ವಿಚಾರವಾಗಿ 1962 ರಲ್ಲಿ ಭಾರತ-ಚೀನಾ ನಡುವೆ ಯುದ್ಧವಾಯಿತು. ಯುದ್ಧದಲ್ಲಿ ಭಾರತ ಸೋತಿತು. ಇದು ಆಡಳಿತ ವಿರೋಧಿ ಅಲೆ ಉಲ್ಬಣಗೊಳ್ಳಲು ಕಾರಣವಾಯಿತು. ಇದಾದ ಎರಡು ವರ್ಷಗಳಲ್ಲೇ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು 1964 ರಲ್ಲಿ ನಿಧನರಾದರು. ಆಗ ಭಾರತದ ಪ್ರಧಾನಿಯಾಗಿ ಲಾಲ್‌ಬಹದ್ದೂರ್ ಶಾಸ್ತ್ರೀ ಆಡಳಿತ ನಡೆಸಿದರು. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!
Advertisement
Advertisement
ಪಾಕ್ ವಿರುದ್ಧ ಗೆದ್ದ ಭಾರತ
1965 ರಲ್ಲಿ ಭಾರತದ ಮೇಲೆ ಪಾಕಿಸ್ತಾನ ಸಮರ ಸಾರಿತು. ಪಾಕ್ ಸೇನೆಯನ್ನು ಭಾರತ ಬಗ್ಗು ಬಡಿಯಿತು. ಯುದ್ಧದ ಅಂತ್ಯಕ್ಕೆ ಭಾರತ-ಪಶ್ಚಿಮ ತಾಷ್ಕೆಂಟ್ ಘೋಷಣೆಯಾಯಿತು. ಹೀಗಿರುವಾಗ, ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರೀ ಸಂಶಯಾಸ್ಪದವಾಗಿ ಸಾವನ್ನಪ್ಪಿದರು. ಆಗ ಹಂಗಾಮಿ ಪ್ರಧಾನಿಯಾಗಿ ಗುಲ್ಜಾರಿಲಾಲ್ ನಂದಾ ಅಧಿಕಾರ ವಹಿಸಿಕೊಂಡರು. ಬಳಿಕ ಇಂದಿರಾ ಗಾಂಧಿ ಅವರು ಪ್ರಧಾನಿ ಹುದ್ದೆಗೇರಿದರು.
Advertisement
ಆಹಾರದ ಅಭಾವ
1965 ರಲ್ಲಿ ದೇಶದಲ್ಲಿ ಮುಂಗಾರು ಕೈಕೊಟ್ಟಿತ್ತು. ಮಳೆ ಕೊರತೆಯಿಂದಾಗಿ ದೇಶದ ಹಲವು ರಾಜ್ಯಗಳು ಬರ ಪರಿಸ್ಥಿತಿ ಎದುರಿಸುವಂತಾಯಿತು. ಬಿಹಾರ ರಾಜ್ಯವನ್ನು ಬರ ಇನ್ನಿಲ್ಲದಂತೆ ಕಾಡಿತ್ತು. ಬರಗಾಲದ ಜೊತೆಗೆ ಆರ್ಥಿಕ ಪರಿಸ್ಥಿತಿ, ಹಣದುಬ್ಬರವೂ ದೇಶವನ್ನು ಕಾಡಿತ್ತು. 1966-67 ರ ಅವಧಿಯಲ್ಲಿ ಭಾರತವು ಸುಮಾರು 20 ಮಿಲಿಯನ್ ಟನ್‌ನಷ್ಟು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡಿತು. ಆದರೆ 48 ಕೋಟಿ ಜನರಿಗೆ ಅದು ಸಾಕಾಗಲಿಲ್ಲ. ಇದು ಮುಂದೆ ಹಸಿರು ಕ್ರಾಂತಿಗೆ ನಾಂದಿ ಹಾಡಿತು.
5 ದಿನದ ಚುನಾವಣೆ
1967 ರ ಲೋಕಸಭಾ ಚುನಾವಣೆಯು (1967 Lok Sabha Elections) ಕೇವಲ 5 ದಿನದಲ್ಲಿ ನಡೆಯಿತು. ಭಾರತದ ಸಾರ್ವತ್ರಿಕ ಚುನಾವಣಾ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ನಡೆದ ಚುನಾವಣೆ ಎಂಬ ದಾಖಲೆ ಬರೆದಿದೆ. 1967 ರ ಫೆಬ್ರವರಿ 17 ರಿಂದ 21 ರ ವರೆಗೆ ಮತದಾನ ನಡೆಯಿತು.
7 ರಾಷ್ಟ್ರೀಯ ಪಕ್ಷಗಳು
ಚುನಾವಣೆಯಲ್ಲಿ 7 ರಾಷ್ಟ್ರೀಯ ಪಕ್ಷಗಳು, 14 ರಾಜ್ಯ ಪಕ್ಷಗಳು, 4 ನೋಂದಾಯಿತ ಜನಪ್ರಿಯವಲ್ಲದ ಪಕ್ಷಗಳು ಸ್ಪರ್ಧಿಸಿದ್ದವು. ಇದನ್ನೂ ಓದಿ: ಲೋಕಸಭೆ ಚುನಾವಣೆಗಳು ಭಾರತದಲ್ಲಿ ನಡೆದಿದ್ದೆಷ್ಟು ದಿನ..?
494-520 ಕ್ಕೆ ಕ್ಷೇತ್ರಗಳ ಸಂಖ್ಯೆ ಹೆಚ್ಚಳ
ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 494 ರಿಂದ 520 ಕ್ಕೆ ಹೆಚ್ಚಿಸಲಾಯಿತು. ಸಾಮಾನ್ಯ ವರ್ಗಕ್ಕೆ 406, ಎಸ್‌ಸಿಗೆ 77 ಮತ್ತು ಎಸ್‌ಟಿಗೆ 37 ಕ್ಷೇತ್ರಗಳನ್ನು ಮೀಸಲಿಡಲಾಯಿತು.
61% ಮತದಾನ
1967 ರ ಚುನಾವಣೆಗೆ 25,02,07,401 ಮತದಾರರು ಅರ್ಹತೆ ಪಡೆದುಕೊಂಡಿದ್ದರು. ಅವರ ಪೈಕಿ 15,27,24,611 ಮಂದಿ ಮತ ಚಲಾಯಿಸಿದ್ದರು. ಒಟ್ಟು 61.04% ಮತದಾನವಾಯಿತು. 2,43,693 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
2,369 ಅಭ್ಯರ್ಥಿಗಳು ಸ್ಪರ್ಧೆ
ಚುನಾವಣೆಯಲ್ಲಿ 2,369 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರ ಪೈಕಿ 67 ಮಹಿಳಾ ಅಭ್ಯರ್ಥಿಗಳು (29 ಗೆಲುವು) ಸ್ಪರ್ಧಿಸಿದ್ದರು. ಇದನ್ನೂ ಓದಿ: ಲೋಕ ಅಖಾಡದಲ್ಲಿರುವ ಮಾಜಿ ಸಿಎಂಗಳು- ಯಾರೆಲ್ಲ ಕಣದಲಿದ್ದಾರೆ?, ಯಾವ ಅವಧಿಯಲ್ಲಿ ಸಿಎಂ ಆಗಿದ್ದಾರೆ?
ಕುಸಿದ ಕಾಂಗ್ರೆಸ್, ಗೆದ್ದ ಇಂದಿರಾ
ಆಡಳಿತ ವಿರೋಧಿ ಅಲೆ, ಆಂತರಿಕ ಬಂಡಾಯ, ಹೆಚ್ಚುತ್ತಿದ್ದ ಪ್ರತಿಪಕ್ಷಗಳ ಪ್ರಾಬಲ್ಯದಿಂದಾಗಿ 1967 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ಮತ ಪ್ರಮಾಣ ಕುಸಿಯಿತು. 520 ಕ್ಷೇತ್ರಗಳಲ್ಲಿ 283 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತು. ಕಳೆದ ಚುನಾವಣೆಗೆ ಹೋಲಿಸಿದರೆ ಪಕ್ಷಕ್ಕೆ 78 ಸ್ಥಾನಗಳ ಹಿನ್ನಡೆ ಉಂಟಾಯಿತು. ಇಂದಿರಾ ಗಾಂಧಿ ಸಂಪುಟದಲ್ಲಿ 7 ಸಚಿವರು ಸೋಲು ಕಂಡರು.
ಪ್ರತಿಪಕ್ಷಗಳ ಪ್ರಾಬಲ್ಯ
ಸಿ.ರಾಜಗೋಪಾಲಚಾರಿ ಅವರ ‘ಸ್ವತಂತ್ರ ಪಕ್ಷ’ (ಎಸ್‌ಡಬ್ಲ್ಯೂಎ) 44 ಸ್ಥಾನಗಳನ್ನು ಗೆದ್ದು ಪ್ರತಿಪಕ್ಷವಾಗಿ ಹೊರಹೊಮ್ಮಿತು. ಭಾರತೀಯ ಜನಸಂಘ 14 ರಿಂದ 35 ಸ್ಥಾನಗಳಿಗೆ ವೃದ್ಧಿಯಾಯಿತು.
ತಮಿಳುನಾಡಿನಲ್ಲಿ ನೆಲಕಚ್ಚಿದ ಕಾಂಗ್ರೆಸ್
ಎಲ್ಲ ರಾಜ್ಯಗಳಲ್ಲೂ ಪ್ರಾಬಲ್ಯ ಮೆರೆಯುತ್ತಿದ್ದ ಕಾಂಗ್ರೆಸ್ ತಮಿಳುನಾಡಿನಲ್ಲಿ (ಆಗಿನ ಮದ್ರಾಸ್) ನೆಲ ಕಚ್ಚಿತು. ಮದ್ರಾಸ್‌ನ 39 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿದ್ದು ಕೇವಲ 3 ಕ್ಷೇತ್ರ ಮಾತ್ರ. ಉಳಿದಂತೆ ಡಿಎಂಕೆ 25, ಸ್ವತಂತ್ರ ಪಕ್ಷ 6, ಸಿಪಿಎಂ 4 ಸ್ಥಾನಗಳನ್ನು ಗೆದ್ದು ಮೆರೆದವು. ಇದನ್ನೂ ಓದಿ: ಕಾಂಗ್ರೆಸ್ ಪತನ 2014 ರಿಂದ ಅಲ್ಲ1996 ರಿಂದ ಆರಂಭ!
ದಕ್ಷಿಣದಲ್ಲಿ ಹಿಂದಿ ವಿರೋಧಿ ಹೋರಾಟ
ಚುನಾವಣೆ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಹಿಂದಿ ವಿರೋಧಿ ಹೋರಾಟ ಹೆಚ್ಚಾಗಿತ್ತು. ಈ ಹೋರಾಟ ತಮಿಳುನಾಡಿನಲ್ಲಿ ಹೆಚ್ಚು ಸದ್ದು ಮಾಡಿತು. ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮಕಾಡೆ ಮಲಗಿತು. ವಿಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗೆದ್ದು ನೆಲೆ ಭದ್ರಪಡಿಸಿಕೊಂಡವು.
ಕರ್ನಾಟಕದಲ್ಲಿ ಏನಾಗಿತ್ತು?
ರಾಜ್ಯದಲ್ಲಿ 27 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 18 ರಲ್ಲಿ ಗೆಲುವು ಸಾಧಿಸಿತು. ಸ್ವತಂತ್ರ ಪಕ್ಷ 5, ಎಸ್‌ಎಸ್‌ಪಿ ಒಂದು ಸ್ಥಾನ ಗೆದ್ದಿತು. ಪಿಎಸ್‌ಪಿ 2 ಸ್ಥಾನ ಗಳಿಸಿತು. ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವು ದಾಖಲಿಸಿದ್ದರು.
ಮೈಸೂರು ರಾಜ್ಯದಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿ ಯಾರು?
1967 ರ ಚುನಾವಣೆಯಲ್ಲಿ ಆಗಿನ ಮೈಸೂರು ರಾಜ್ಯದಿಂದ ಸ್ಪರ್ಧೆಗಿಳಿದಿದ್ದ 45 ಪಕ್ಷೇತರ ಅಭ್ಯರ್ಥಿಗಳ ಪೈಕಿ ಗೆದ್ದವರು ಮಾತ್ರ ಒಬ್ಬರು. ಕೆನರಾ ಕ್ಷೇತ್ರದಿಂದ (ಈಗಿನ ಉತ್ತರ ಕನ್ನಡ ಜಿಲ್ಲೆ) ಸ್ಪರ್ಧಿಸಿದ್ದ ಡಿ.ಡಿ.ದತ್ತಾತ್ರೇಯ ಅವರು 27,297 ಮತಗಳ ಅಂತರದಿಂದ ಗೆದ್ದಿದ್ದರು.