ನವದೆಹಲಿ: ಕಳೆದ 10 ವರ್ಷಗಳಲ್ಲಿ (2015-2025) ಜಾರಿ ನಿರ್ದೇಶನಾಲಯ (ED) ಸಂಸದರು, ಶಾಸಕರು ಸೇರಿದಂತೆ ರಾಜಕಾರಣಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ಒಟ್ಟು 193 ಪ್ರಕರಣಗಳನ್ನು ದಾಖಲಿಸಿದ್ದು ಈ ಪ್ರಕರಣಗಳಲ್ಲಿ ಕೇವಲ ಇಬ್ಬರಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, 2015ರಿಂದ 2025ರವರೆಗೆ ದಾಖಲಾದ 193 ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಿ 2016-17ರಲ್ಲಿ ಮತ್ತು ಮತ್ತೊಂದರಲ್ಲಿ 2019-20ರಲ್ಲಿ ಶಿಕ್ಷೆ ದೊರೆತಿದೆ. ಉಳಿದಂತೆ ಬಹುತೇಕ ಪ್ರಕರಣಗಳಲ್ಲಿ ತನಿಖೆ ಮುಗಿದಿಲ್ಲ ಅಥವಾ ಅಪರಾಧ ಸಾಬೀತಾಗಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಸರ್ಕಾರಿ ಸಾರಿಗೆ ಬಸ್ – ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ಇಡಿ ತನಿಖೆಗೆ ತೆಗೆದುಕೊಂಡ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ ಶಿಕ್ಷೆಯ ಪ್ರಮಾಣ ಕೇವಲ 1%ಕ್ಕಿಂತ ಕಡಿಮೆ ಇರುವುದು ಗಮನಾರ್ಹ. ಈ ಅಂಕಿಅಂಶಗಳು ಇಡಿಯ ಕಾರ್ಯವೈಖರಿಯ ಬಗ್ಗೆ ಚರ್ಚೆಗೆ ಕಾರಣವಾಗಿವೆ. ಕೇಂದ್ರ ಸರ್ಕಾರವು ಇಡಿ ತನಿಖೆಗಳು ವಿಶ್ವಾಸಾರ್ಹ ಸಾಕ್ಷ್ಯಗಳ ಆಧಾರದ ಮೇಲೆ ನಡೆಯುತ್ತವೆ ಮತ್ತು ರಾಜಕೀಯ ಸಂಬಂಧಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: 2028ರಲ್ಲಿ ನಮ್ಮ ಸರ್ಕಾರ ಬಂದ್ರೆ ಗೃಹಲಕ್ಷ್ಮಿ ಹಣವನ್ನ 4,000 ರೂ.ಗೆ ಏರಿಸುತ್ತೇವೆ : ಕುಣಿಗಲ್ ರಂಗನಾಥ್
ವಿರೋಧ ಪಕ್ಷಗಳು ಈ ಮಾಹಿತಿಯನ್ನು ಆಧರಿಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇಡಿ ಎಂಬುದು ಬಿಜೆಪಿ ಸರ್ಕಾರದ ಅಸ್ತ್ರವಾಗಿದ್ದು, ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಮಟ್ಟ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆ ಇರುವುದು ಈ ಆರೋಪಕ್ಕೆ ಬಲ ನೀಡಿದೆ ಎಂದು ವಿರೋಧ ಪಕ್ಷಗಳು ವಾದಿಸಿವೆ. ಇದನ್ನೂ ಓದಿ: ಕಲುಷಿತ ಆಹಾರ ಸೇವನೆ ಕೇಸ್ | ಚಿಕಿತ್ಸೆ ಪಡೆಯುತ್ತಿರುವ ಮೇಘಾಲಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿ – ಮಂಡ್ಯ ಡಿಸಿ