– ವಿವಾಹಕ್ಕೆ ಕಾನೂನು ತೊಡಕು
ಮುಂಬೈ: ಕುಟುಂಬದ ಸದಸ್ಯರು ಕೊಲೆ ಬೆದರಿಕೆ ಹಾಕಿದ್ದಾರೆ. ನನಗೆ ರಕ್ಷಣೆ ಕೊಡಿ ಎಂದು 19 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬಳು ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.
ಮುಂಬೈನ ಪ್ರಿಯಾಂಕಾ ಶೆಟೆ ಕೋರ್ಟ್ ಮೆಟ್ಟಿಲೇರಿದ ಕಾನೂನು ವಿದ್ಯಾರ್ಥಿನಿ. ಪ್ರಿಯಾಂಕಾ ತನ್ನ ಸಹಪಾಠಿ ವಿರಾಜ್ ಅವಘರ್ ನನ್ನು ಪ್ರೀತಿ ಸುತ್ತಿದ್ದಾಳೆ. ಆದರೆ ಪ್ರಿಯಾಂಕಾ ಮರಾಠ ಸಮುದಾಯಕ್ಕೆ ಸೇರಿದ್ದು, ವಿರಾಜ್ ಮಾತಂಗ್ ಸಮುದಾಯಕ್ಕೆ ಸೇರಿದವರಾಗಿದ್ದಾನೆ. ಈ ವಿಚಾರ ಮನೆಯವರಿಗೆ ತಿಳಿದಿದ್ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ನಾನು ಹಾಗೂ ವಿರಾಜ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ಈ ವಿಚಾರ ಕುಟುಂಬದವರಿಗೆ ಗೊತ್ತಾಗಿ, ಆತನನ್ನು ಬಿಡುವಂತೆ ಚಿತ್ರಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಆತನ ಜೊತೆಗೆ ಸಂಬಂಧ ಮುಂದುವರಿಸಿದರೆ ಕೊಲೆಗೈಯುತ್ತೇವೆ ಎಂದಿದ್ದಾರೆ. ಚಿಕ್ಕಪ್ಪ ಕೂಡ ಗನ್ ಹಿಡಿದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಪ್ರಿಯಾಂಕಾ ದೂರಿದ್ದಾಳೆ.
ಮನೆಯಿಂದ ಹೊರಗೆ ಬಂದಿರುವ ನನ್ನನ್ನು ಹಾಗೂ ವಿರಾಜ್‍ನನ್ನು ಹಿಂಬಾಲಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ದೂರವಾಣಿ ಮೂಲಕ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ವಿರಾಜ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾನೆ ಎಂದು ಪ್ರಿಯಾಂಕಾ ಅಳಲು ತೋಡಿಕೊಂಡಿದ್ದಾಳೆ.
ಪೋಷಕರ ವಿರುದ್ಧ ದೂರು ನೀಡಲು ಠಾಣೆಗೆ ಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ ನಮಗೆ ಕುಟುಂಬದಿಂದ ರಕ್ಷಣೆ ಕೊಡಿ ಎಂದು ಪ್ರಿಯಾಂಕ ಮುಂಬೈ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾಳೆ.
ವಿರಾಜ್ ಅವಘರ್ ಈಗ 19 ವರ್ಷ. ಕಾನೂನು ಪ್ರಕಾರ ಪುರುಷರ ವಿವಾಹದ ವಯಸ್ಸು 21. ಇದರಿಂದಾಗಿ ಇಬ್ಬರು ಕಾನೂನುಬದ್ಧವಾಗಿ ಎರಡು ವರ್ಷಗಳ ಕಾಲ ಮದುವೆಯಾಗಲು ಸಾಧ್ಯವಿಲ್ಲ.