ಈಗ ವಿಶ್ವವೇ ಒಂದು ರೀತಿಯಲ್ಲಿ ಕನ್ನಡ ಸಿನಿಮಾ ರಂಗದತ್ತ ತಿರುಗುವಂತೆ ಮಾಡಿದ ಹೆಗ್ಗಳಿಗೆ ಕೆಜಿಎಫ್ 2 ಚಿತ್ರತಂಡದ್ದು. ಬಾಲಿವುಡ್ ಚಿತ್ರರಂಗವು ಒಂದು ರೀತಿಯಲ್ಲಿ ದಕ್ಷಿಣದವರನ್ನು, ಅದರಲ್ಲೂ ಕನ್ನಡ ಸಿನಿಮಾ ರಂಗದವರನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಸ್ಯಾಟ್ ಲೈಟ್ ಹಕ್ಕುಗಳು ಸೇರಿದಂತೆ ಕನ್ನಡ ಸಿನಿಮಾಗಳಿಗೆ ಬೆಲೆಯೇ ಇಲ್ಲ ಎನ್ನುವಂತಹ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಇದೀಗ ಕೆಜಿಎಫ್ ಸಿನಿಮಾ ನಂತರ ಕನ್ನಡ ಸಿನಿಮಾ ರಂಗವನ್ನು ವಿಶ್ಲೇಷಿಸುವುದೇ ರೀತಿಯೇ ಬೇರೆಯಾಗಿದೆ. ಅಷ್ಟರ ಮಟ್ಟಿಗೆ ಕನ್ನಡದ ಚಿತ್ರಗಳು ಪೈಪೋಟಿ ಮಾಡುತ್ತಿವೆ.
ಕನ್ನಡ ಸಿನಿಮಾವೆಂದರೆ ಕೆಜಿಎಫ್ ಚಿತ್ರ ಎನ್ನುವಂತಹ ವಾತಾವರಣ ಸದ್ಯ ಸೃಷ್ಟಿಯಾಗಿದೆ. ಈ ಸಿನಿಮಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಡಿಮಾಂಡ್ ಕ್ರಿಯೇಟ್ ಆಗಿದೆ. ಅದರಲ್ಲೂ ಈ ಸಿನಿಮಾದ ಎಡಿಟರ್ (ಸಂಕಲನಕಾರ) ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇವಲ 19ರ ವಯಸ್ಸಿನ ಈ ಹುಡುಗ ಟೀಸರ್ ಮೂಲಕ ಈಗಾಗಲೇ ಮೋಡಿ ಮಾಡಿದ್ದಾರೆ. ಸಿನಿಮಾವನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗಿದ್ದಾರೆ ಎನ್ನುವ ಮಾತು ಸ್ವತಃ ಚಿತ್ರತಂಡದಿಂದಲೇ ಬಂದಿದೆ. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್
ಅಷ್ಟಕ್ಕೂ ಈ ಹುಡುಗ ಯಾರು? ಏನು ಮಾಡುತ್ತಿದ್ದ? ಮತ್ತು ಕೆಜಿಎಫ್ ತಂಡಕ್ಕೆ ಸೇರ್ಪಡೆಗೊಂಡಿದ್ದು ಹೇಗೆ ಎನ್ನುವುದೇ ಇಂಟ್ರಸ್ಟಿಂಗ್ ಸಂಗತಿ. ಕೆಜಿಎಫ್ 2 ಎಡಿಟ್ ಮಾಡಿದ್ದು ಉಜ್ವಲ್ ಕುಲಕರ್ಣಿ ಎಂಬ ಹತ್ತೊಂಬತ್ತರ ಹರೆಯದ ಹುಡುಗ. ಮೂಲತಃ ಉತ್ತರ ಕರ್ನಾಟಕದವನು. ಯಶ್ ಅವರ ಬಹುದೊಡ್ಡ ಅಭಿಮಾನಿ. ಕೆಜಿಎಫ್ ಚಾಪ್ಟರ್ 1 ರಿಲೀಸ್ ಆದಾಗ, ಥಿಯೇಟರ್ ಮುಂದೆ ಕೇಕ್ ಕತ್ತರಿಸಿ, ಡಾನ್ಸ್ ಮಾಡಿ ಆ ಸಿನಿಮಾವನ್ನು ಸಂಭ್ರಮಿಸಿದವನು. ಇದೀಗ ಅದೇ ಸಿನಿಮಾದ ಮುಂದುವರೆದ ಭಾಗದಲ್ಲಿ ಕೆಲಸ ಮಾಡುವಂತಹ ಅವಕಾಶ ಸಿಕ್ಕಿದೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್
ಕೆಜಿಎಫ್ ಚಾಪ್ಟರ್ ಒಂದು ಬಿಡುಗಡೆಯಾದಾಗ, ಈ ಸಿನಿಮಾದ ಹಾಡೊಂದಕ್ಕೆ ಕೆಜಿಎಫ್ ಚಿತ್ರದ ಕೆಲ ದೃಶ್ಯಗಳನ್ನು ಕತ್ತರಿಸಿ ‘ಫ್ಯಾನ್ ಮೇಡ್ ಸಾಂಗ್’ ಮಾಡಿದ್ದರು ಉಜ್ವಲ್ ಕುಲಕರ್ಣಿ. ಅದನ್ನು ಯೂಟ್ಯೂಬ್ ನಲ್ಲಿ ಹಾಕಿದ್ದ. ಈ ಫ್ಯಾನ್ ಮೇಡ್ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಪತ್ನಿಗೂ ತಲುಪಿತ್ತು. ತುಂಬಾ ಕ್ರಿಯೇಟಿವ್ ಆಗಿ ಎಡಿಟ್ ಮಾಡಿದ್ದನ್ನು ಗಮನಿಸಿದ ಪ್ರಶಾಂತ್ ಪತ್ನಿ, ಈ ಹುಡುಗನನ್ನು ಹುಡುಕಿಸಿ ಪ್ರಶಾಂತ್ ನೀಲ್ ಗೆ ಪರಿಚಯ ಮಾಡಿಸುತ್ತಾರೆ. ಆ ಹುಡುಗನೊಳಗಿನ ಪ್ರತಿಭೆಯನ್ನು ಕಂಡು ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್
ಸಿಕ್ಕಿರುವ ಈ ದೊಡ್ಡ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿರುವ ಉಜ್ವಲ್, ಅಚ್ಚರಿ ಮೂಡಿಸುವಂತಹ ಟೀಸರ್ ಅನ್ನು ಈಗಾಗಲೇ ಕೊಟ್ಟಿದ್ದಾರೆ. ಸಿನಿಮಾವಂತೂ ಇನ್ನೂ ಬೊಂಬಾಟಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.