ಪರ್ತ್: ವಿಶ್ವದ ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಶಸ್ 2025-26 (The Ashes) ಸರಣಿ ಇಂದಿನಿಂದ ಶುರುವಾಗಿದೆ. ಪರ್ತ್‌ನ (Perth) ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಬರೋಬ್ಬರಿ 19 ವಿಕೆಟ್‌ಗಳು ಪತನಗೊಂಡಿವೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡು ಫೀಲ್ಡಿಂಗ್ ಮಾಡುವ ಅವಕಾಶವನ್ನು ಆತಿಥೇಯ ಆಸೀಸ್‌ಗೆ ಬಿಟ್ಟುಕೊಟ್ಟಿತ್ತು. ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸುವ ಮೂಲಕ 172 ರನ್‌ಗಳಿಗೆ ಆಂಗ್ಲರನ್ನು ಕಟ್ಟಿಹಾಕಿದ್ದ ಆಸೀಸ್ (Australia), ಬ್ಯಾಟಿಂಗ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಮೊದಲ ದಿನದ ಅಂತ್ಯಕ್ಕೆ ಕೇವಲ 123 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದೆ. ನಥಾನ್ ಲಿಯಾನ್ (3 ರನ್), ಬ್ರೆಂಡನ್ ಡಾಗೆಟ್ (ಶೂನ್ಯ) ಕ್ರೀಸ್‌ನಲ್ಲಿದ್ದು, ಶನಿವಾರ 2ನೇ ದಿನದ ಆಟ ಆರಂಭಿಸಲಿದ್ದಾರೆ.

ಸ್ಟಾರ್ಕ್ ವೇಗಕ್ಕೆ ತತ್ತರಿಸಿದ ಆಂಗ್ಲಪಡೆ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ (England) ವೇಗಿ ಮಿಚೆಲ್ ಸ್ಟಾರ್ಕ್ ವೇಗಕ್ಕೆ ಧೂಳಿಪಟವಾಯಿತು. ಮೊದಲ ಓವರ್‌ನಲ್ಲೇ ಝಾಕ್ ಕ್ರಾವ್ಲಿ ವಿಕೆಟ್ ಕೀಳುವ ಮೂಲಕ ಇಂಗ್ಲೆಂಡ್‌ಗೆ ಸ್ಟಾರ್ಕ್ ಆಘಾತ ನೀಡಿದರು. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ ಅಮೋಘ ಅರ್ಧಶತಕ (52 ರನ್, 61 ಎಸೆತ, 5 ಬೌಂಡರಿ, 1 ಸಿಕ್ಸರ್), ಓಲಿ ಪೋಪ್ 46 ರನ್ (58 ಎಸೆತ, 4 ಬೌಂಡರಿ), ಜೇಮಿ ಸ್ಮಿತ್ (33 ರನ್ (22 ಎಸೆತ, 6 ಬೌಂಡರಿ) ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡರು. ಭಾರೀ ನಿರೀಕ್ಷೆ ಮೂಡಿಸಿದ್ದ ಜೋ ರೂಟ್ ಶೂನ್ಯ ಸುತ್ತಿದ್ರೆ ಕ್ಯಾಪ್ಟನ್ ಬೆನ್ ಸ್ಟೋಕ್ಸ್ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಇನ್ನು ಆಸ್ಟ್ರೇಲಿಯಾ ಪರ ಬೆಂಕಿ ಬೌಲಿಂಗ್ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್ 12.5 ಓವರ್‌ಗಳಲ್ಲಿ 58 ರನ್ ಗಳಿಗೆ 7 ವಿಕೆಟ್ ಕಿತ್ತರೆ, ಬ್ರೆಡನ್ ಡಾಗೆಟ್ 2 ವಿಕೆಟ್, ಕ್ಯಾಮರೂನ್ ಗ್ರೀನ್ 1 ವಿಕೆಟ್ ಪಡೆದು ಮಿಂಚಿದರು.
ಆಸೀಸ್‌ಗೆ ಮಾಸ್ಟರ್ ಸ್ಟೋಕ್ಸ್
ಬ್ಯಾಟಿಂಗ್‌ನಲ್ಲಿ ಹೀನಾಯ ಪ್ರದರ್ಶನ ಕಂಡರೂ ಬೌಲಿಂಗ್‌ನಲ್ಲಿ ಆರ್ಭಟಿಸಿದ ಇಂಗ್ಲೆಂಡ್, ಮೊದಲ ದಿನ ಆಸೀಸ್ ತಂಡವನ್ನ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಆಂಗ್ಲರ ದಾಳಿಗೆ ತತ್ತರಿಸಿದ ಆಸೀಸ್ ಮೊದಲ ದಿನ ಕೇವಲ 123 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದೆ.

ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ 5 ವಿಕೆಟ್ ಕಿತ್ತರೆ, ಬ್ರ್ಯಾಂಡನ್ ಕರ್ಸ್, ಜೋಫ್ರಾ ಆರ್ಚರ್ ತಲಾ 2 ವಿಕೆಟ್ ಕಿತ್ತರು.
