ಬೆಂಗಳೂರು: ಇದು ಕನ್ನಡ ಚಿತ್ರರಂಗದ ಪಾಲಿಗೆ ಹೊಸಾ ಹರಿವನ್ನು ಒಳಗೊಳ್ಳುವ ಪರ್ವ ಕಾಲ. ಪ್ರೇಕ್ಷಕರೆಲ್ಲ ಅಚ್ಚರಿಗೊಂಡು ಅಪ್ಪಿಕೊಳ್ಳುವಂಥಾ ಕಂಟೆಂಟಿನ ಚಿತ್ರಗಳೇ ಅಡಿಗಡಿಗೆ ತೆರೆಗಾಣುತ್ತಾ ಚಿತ್ರರಂಗ ಹೊಸತನದಿಂದ ಲಕಲಕಿಸುತ್ತಿದೆ. ಇದೀಗ ಅಂಥಾದ್ದೇ ಮೋಡಿ ಸೃಷ್ಟಿಸುವ ಹುಮ್ಮಸ್ಸಿನೊಂದಿಗೆ ಹೊಸಬರ ತಂಡವೊಂದು 19 ಏಜ್ ಈಸ್ ನಾನ್‍ಸೆನ್ಸ್ ಎಂಬ ಚಿತ್ರವನ್ನು ರೂಪಿಸಿದೆ. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ಉಳಿದ ಕೆಲಸ ಕಾರ್ಯಗಳನ್ನೂ ಸಮಾಪ್ತಿಯಾಗಿಸಿಕೊಂಡಿರೋ ಈ ಚಿತ್ರದ ಸೆನ್ಸಾರ್ ಕಾರ್ಯವೂ ಇದೀಗ ಮುಗಿದಿದೆ. ಸೆನ್ಸಾರ್ ಮಂಡಳಿ ಅಧಿಕಾರಿಗಳು ತುಂಬು ಮೆಚ್ಚುಗೆಯೊಂದಿಗೆ ಯು/ಎ ಸರ್ಟಿಫಿಕೆಟ್ ಕೊಟ್ಟಿದ್ದಾರೆ.
Advertisement
ಸೆನ್ಸಾರ್ ಅಧಿಕಾರಿಗಳು ತಿಂಗಳೊಂದಕ್ಕೆ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನು ನೋಡುತ್ತಾರೆ. ಆದರೆ ಖುದ್ದು ಅವರೇ ಮೆಚ್ಚುಗೆ ಸೂಚಿಸೋದು ತುಂಬಾನೇ ವಿರಳ. ಆದರೆ 19 ಏಜ್ ಈಸ್ ನಾನ್‍ಸೆನ್ಸ್ ಚಿತ್ರವನ್ನು ವೀಕ್ಷಿಸಿದ ಅಧಿಕಾರಿಗಳು ಅದರ ತಾಜಾತನ, ಹೊಸತನಕ್ಕೆ ತಲೆದೂಗಿದ್ದಾರೆ. ಇಡೀ ಚಿತ್ರತಂಡವನ್ನು ಅಭಿನಂದಿಸಿದ್ದಾರೆ. ಇದು ಹೊಸಬರೇ ಸೇರಿ ರೂಪಿಸಿರೋ ಚಿತ್ರ. ಸೆನ್ಸಾರ್ ಅಧಿಕಾರಿಗಳ ಮೆಚ್ಚುಗೆ ಈ ತಂಡಕ್ಕೆ ಹುಮ್ಮಸ್ಸು ತುಂಬಿದೆ. ಕೆಲ ದಿನಗಳಿಂದ ಸುದ್ದಿ ಕೇಂದ್ರದಲ್ಲಿರೋ ಈ ಸಿನಿಮಾ ಈ ಮೂಲಕವೇ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದುಕೊಳ್ಳೋದರಲ್ಲಿ ಯಾವ ಸಂಶಯವೂ ಇಲ್ಲ.
Advertisement
Advertisement
ಇದು ಲೋಕೇಶ್ ನಿರ್ಮಾಣ ಮಾಡಿರೋ ಚಿತ್ರ. ಸ್ಟೋನ್ ಕ್ಲಾಡಿಂಗ್ ವ್ಯವಹಾರ ನಡೆಸುತ್ತಲೇ ಅಪಾರವಾದ ಸಿನಿಮಾ ಪ್ರೇಮ ಹೊಂದಿದ್ದ ಅವರ ಕನಸು ಈ ಮೂಲಕವೇ ಸಾಕಾರಗೊಂಡಿದೆ. ಇಲ್ಲಿ ನಾಯಕನಾಗಿ ನಟಿಸಿರೋ ಮನುಷ್ ನಿರ್ಮಾಪಕರ ಪುತ್ರ. ಈಗ ತಾನೇ ಮೊದಲ ವರ್ಷದ ಬಿಕಾಂ ವಿದ್ಯಾರ್ಥಿಯಾಗಿರುವ ಮನುಷ್ ನಟನೆ, ನೃತ್ಯ ಸೇರಿದಂತೆ ಎಲ್ಲದರಲ್ಲಿಯೂ ತರಬೇತಿ ಪಡೆದುಕೊಂಡು ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾನೆ. ಇದು ಹತ್ತೊಂಬತ್ತರ ಹರೆಯ ಆವೇಗದ ಕಥೆಯನ್ನೊಳಗೊಂಡಿರೋ ಕಥೆ. ಕುಟುಂಬ ಸಮೇತರಾಗಿ ಕೂತು ನೋಡುವಂತೆ ಇದನ್ನು ಸುರೇಶ್ ಎಂ. ಗಿಣಿ ನಿರ್ದೇಶನ ಮಾಡಿದ್ದಾರಂತೆ. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋ 19 ಏಜ್ ಈಸ್ ನಾನ್‍ಸೆನ್ಸ್ ಚಿತ್ರಮಂದಿರಗಳತ್ತ ಮುಖ ಮಾಡಿದೆ.