– ಗೆಲುವಿನ ಬಳಿಕ ಮೊದಲ ಭಾಷಣ ಮಾಡಿದ ಕಮಲಾ
ವಾಷಿಂಗ್ಟನ್: ವಿಶ್ವದ ಗಮನವನ್ನೇ ಸೆಳೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಕೊನೆಗೂ ಅಚ್ಚರಿಯ ರೀತಿಯಲ್ಲಿ ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಅಭ್ಯರ್ಥಿ ಜೋ ಬೈಡನ್ 273 ಮತಗಳನ್ನು ಪಡೆಯುವುದರ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇದರಿಂದಾಗಿ ಅಮೆರಿಕದಾದ್ಯಂತ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಜಯಘೋಷ ಕೇಳಿ ಬರುತ್ತಿದೆ. ಅದೇ ರೀತಿ ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷರಾಗಿರುವುದಕ್ಕೂ ಸಹ ಭಾರತೀಯರು ಸಂಭ್ರಮಿಸುತ್ತಿದ್ದಾರೆ.
ಜೋ ಬೈಡನ್ 46ನೇ ಅಮೆರಿಕ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಗೆಲುವು ಸಾಧಿಸುವ ಮೂಲಕ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಜಯಗಳಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ 270 ಮ್ಯಾಜಿಕ್ ನಂಬರ್ ಆಗಿತ್ತು. 273 ಎಲೆಕ್ಟ್ರಲ್ ಮತಗಳನ್ನು ಗಳಿಸುವ ಮೂಲಕ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ. ಉಪಾಧ್ಯಕ್ಷೆಯಾಗಿ ತಮಿಳುನಾಡು ಮೂಲದ ಕಮಲ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಭಾರತೀಯರಿಗೆ ಅವರು ನಮ್ಮ ದೇಶದವರು ಎಂಬ ಸಂಭ್ರಮವಾದರೆ, ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಉಪಾಧ್ಯಕ್ಷರಾಗಿರುವುದು ಅಮೆರಿಕನ್ನರಿಗೆ ಸಂತಸ ತಂದಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಕಮಲಾ ಹ್ಯಾರಿಸ್, ಪ್ರಜಾಪ್ರಭುತ್ವ ಅಧಿಕಾರವಲ್ಲ, ಅದು ಒಂದು ಪ್ರಕ್ರಿಯೆ ಎಂದು ಹೇಳಿದ್ದಾರೆ. ಅಲ್ಲದೆ ಈ ಸಂತಸದ ಸಂದರ್ಭದಲ್ಲಿ ಅವರ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರು ಸ್ಮರಿಸಿದ್ದು, ನನ್ನ ತಾಯಿಗೆ 19 ವರ್ಷದವಳಿದ್ದಾಗ ಭಾರತದಿಂದ ನನ್ನ ತಾಯಿ ಅಮೆರಿಕಗೆ ಬಂದಾಗ ಅವರು ಇದನ್ನು ಊಹಿಸಿರಲಿಲ್ಲ. ಆದರೆ ಈ ರೀತಿಯ ಒಂದು ಕ್ಷಣ ಅನುಭವಿಸಲು ಸಾಧ್ಯವಿರುವ ಅಮೆರಿಕವನ್ನು ಆಳವಾಗಿ ನಂಬಿದ್ದಳು ಭಾವನಾತ್ಮ ಭಾಷಣ ಮಾಡಿದ್ದಾರೆ.
ಜೋ ಬೈಡನ್ ಅಮೆರಿಕದ ಅಧ್ಯಕ್ಷ ಎಂದು ಘೋಷಿಸಲಾಗಿದ್ದು, ಪೆನ್ಸಿಲ್ವೇನಿಯಾದಲ್ಲಿ 20 ಎಲೆಕ್ಟ್ರಲ್ ಮತಗಳನ್ನು ಪಡೆಯುವ ಮೂಲಕ ಬೈಡನ್ ಗೆಲುವು ಸಾಧಿಸಿರುವ ಕುರಿತು ಘೋಷಿಸಲಾಗಿದೆ. ಇನ್ನೇನು ಅಧಿಕಾರ ಸ್ವೀಕಾರ ಮಾತ್ರ ಬಾಕಿ ಉಳಿದಿದೆ. ಅಲ್ಲದೆ ಇಂದು ದೇಶವನ್ನುದ್ದೇಶಿಸಿ ಬೈಡನ್ ಭಾಷಣ ಮಾಡಲಿದ್ದಾರೆ.