ಬೆಂಗಳೂರು: ಅಂಬುಲೆನ್ಸ್ ನಿಯಂತ್ರಣಾ ಕೇಂದ್ರ ಸ್ಥಾಪಿಸುವ ಸಂಬಂಧ 1800 ಕೋಟಿ ರೂ. ಟೆಂಡರ್ ರದ್ದುಗೊಳಿಸಿದ್ದಕ್ಕೆ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಅಂಬುಲೆನ್ಸ್ ಗಳ ಸುಗಮ ಸಂಚಾರಕ್ಕೆ ನಿಯಂತ್ರಣ ಕೇಂದ್ರ ಸ್ಥಾಪಿಸಲು 1800 ಕೋಟಿ ರೂ. ಟೆಂಡರ್ ಕರೆಯಲು ಸರ್ಕಾರ ಮುಂದಾಗಿತ್ತು. ಆದರೆ ಆರೋಗ್ಯ ಸಚಿವರ ಸೂಚನೆಯಂತೆ ಟೆಂಡರ್ ರದ್ದುಗೊಳಿಸಿದ್ದು ಯಾಕೆ ಎಂದು ಪ್ರಶ್ನಿಸಿ ಸಿಜೆ ಎ.ಎಸ್.ಒಕಾ ನೇತೃತ್ವದ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದೆ.
Advertisement
ಹೈಕೋರ್ಟ್ ಟೆಂಡರ್ ಪ್ರಕ್ರಿಯೆಯ ನಿಗಾ ವಹಿಸಿದೆ. ಕೋರ್ಟ್‌ಗೆ ಭರವಸೆ ನೀಡಿದ ಬಳಿಕವೂ ಟೆಂಡರ್ ರದ್ದುಪಡಿಸಿದ್ದು ಯಾಕೆ? ಸರ್ಕಾರದ ಕ್ರಮವೇ ನ್ಯಾಯಾಂಗ ನಿಂದನೆಯಾಗಿದೆ. ಸಚಿವರಿಗೆ ಕೋರ್ಟ್ ವಿಚಾರಣೆಯ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದೆ.
Advertisement
Advertisement
ಸರ್ಕಾರದ ಪ್ರಮಾಣಪತ್ರದಲ್ಲೂ ರದ್ದಿಗೆ ಸಕಾರಣ ನೀಡಿಲ್ಲ. ಕೋರ್ಟ್‌ಗೂ ಮಾಹಿತಿ ನೀಡದೇ ಟೆಂಡರ್ ರದ್ದುಪಡಿಸಿದ್ದೇಕೆ? ಸರ್ಕಾರ ಇದಕ್ಕೆ ಸೂಕ್ತ ವಿವರಣೆ ನೀಡಬೇಕು. ಇಲ್ಲವಾದರೆ ಆರೋಗ್ಯ ಸಚಿವರನ್ನೇ ಪ್ರತಿವಾದಿಯಾಗಿಸುವುದಾಗಿ ಎಚ್ಚರಿಕೆ ನೀಡಿದೆ.
Advertisement
ಟೆಂಡರ್ ರದ್ದುಪಡಿಸಲು ತಜ್ಞರ ಲಿಖಿತ ಅಭಿಪ್ರಾಯವನ್ನೂ ಪಡೆದಿಲ್ಲ. ಇದು ಟೆಂಡರ್ ಪ್ರಕ್ರಿಯೆಯನ್ನು ವಿಳಂಬಿಸುವ ಯತ್ನವೆನಿಸುತ್ತಿದೆ. ಆರೋಗ್ಯ ಸಚಿವರೇ ಸ್ವತಃ ವೃತ್ತಿಪರ ವೈದ್ಯರಾಗಿದ್ದಾರೆ. ಹೀಗಿರುವಾಗ ಟೆಂಡರ್ ರದ್ದುಗೊಳಿಸಿದ್ದು ಯಾಕೆ ಎಂದು ಪ್ರಶ್ನಿಸಿದೆ.
ಅಕ್ರಮಗಳು ನಡೆದಿದೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಸರ್ಕಾರ ಟೆಂಡರ್ ಪ್ರಕ್ರಿಯೆ ರದ್ದು ಮಾಡಲಾಗಿದೆ ಎಂದು ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ ಈ ಸಮಜಾಯಿಷಿಯನ್ನು ಒಪ್ಪದ ಕೋರ್ಟ್ ಚಾಟಿ ಬೀಸಿ ಪ್ರಶ್ನಿಸಿದೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಲ್ಲಿ ಅಂಬುಲೆನ್ಸ್‌ಗಳು ಸಿಲುಕಿಕೊಳ್ಳುತ್ತಿವೆ. ಆಸ್ಪತ್ರೆ ತಲುಪುವುದು ವಿಳಂಬವಾಗಿ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಮರ್ಪಕ ಅಂಬುಲೆನ್ಸ್ ಸೇವೆಗಾಗಿ ನಿಯಂತ್ರಣಾ ಕೇಂದ್ರ ಸ್ಥಾಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಭಾರತ ಪುನರುತ್ಥಾನ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.