ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಭಯೋತ್ಪಾದಕರ ದಾಳಿಯಲ್ಲಿ ಬಲಿಯಾದ ಮೂವರು ಕನ್ನಡಿಗರ ಹೊರತಾಗಿ 180 ಕನ್ನಡಿಗರು ಸುರಕ್ಷಿತರಾಗಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.
ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 180 ಮಂದಿ ಕನ್ನಡಿಗರು ಸುರಕ್ಷಿತವಾಗಿದ್ದು, ಶ್ರೀನಗರದ ವಿವಿಧ ಹೋಟೆಲ್‌ಗಳಲ್ಲಿ ತಂಗಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಮಾನ ವ್ಯವಸ್ಥೆಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮೇಲುಸ್ತುವಾರಿ ಮೂಲಕ ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆ ಮಾಡುತ್ತಿದೆ.ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – 65 ಸಾವಿರಕ್ಕೇರಿಸಿದ್ದ ಪ್ರಯಾಣ ದರ 15,000ಕ್ಕೆ ಇಳಿಕೆ
ಶ್ರೀನಗರದಿಂದ 180 ಜನರ ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಬೆಳಿಗ್ಗೆ 7.30ಕ್ಕೆ ಶ್ರೀನಗರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಸ್ವಂತ ದುಡ್ಡಿನಲ್ಲೇ 180 ಜನರನ್ನ ಕರೆತರುತ್ತಿದ್ದು, ಸ್ವತಃ ಎಲ್ಲರಿಗೂ ಕರೆ ಮಾಡಿ ಬೆಂಗಳೂರಿಗೆ ತಲುಪಿಸುವುದಾಗಿ ಮಾಹಿತಿ ನೀಡಿದ್ದಾರೆ. ಸದ್ಯ ಶ್ರೀನಗರದಲ್ಲಿರುವ ಕನ್ನಡಿಗರು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೂ, ಘಟನೆ ನಡೆದ ಸ್ಥಳದಲ್ಲೇ ಇದ್ದ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಪ್ರಭಾಕರ್ ಕುಟುಂಬ ಕೇವಲ 100 ಮೀಟರ್ ದೂರದಲ್ಲಿ ಪಾರಾದೆವು ಎಂದಿದ್ದಾರೆ. ಹಾನಗಲ್ ಪಟ್ಟಣದ 32 ಜನ, ಕೊಪ್ಪಳದ 4 ಕುಟುಂಬಗಳ 20 ಜನರು ಸೇಫ್ ಆಗಿದ್ದು, ಶ್ರೀನಗರದ ಹೋಟೆಲ್‌ನಲ್ಲಿ ತಂಗಿದ್ದಾರೆ. ಉಡುಪಿಯ ಬ್ರಹ್ಮಾವರ, ಕುಂದಾಪುರದ 20 ಮಂದಿಯ ತಂಡ ಸುರಕ್ಷಿತವಾಗಿದೆ. ಚಿಕ್ಕಮಗಳೂರು ನಗರದ ರಾಮೇಶ್ವರ ನಗರದ ಚಂದ್ರಶೇಖರ್ ಫ್ಯಾಮಿಲಿಯ ಐವರು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿಗಳಾದ ನಾಲ್ವರು ನಿವಾಸಿಗಳು ಸೇಫ್ ಆಗಿದ್ದಾರೆ. ತುಮಕೂರಿನ ರೂಪೇಶ್ ಕೃಷ್ಣಯ್ಯ ಕುಟುಂಬ ಅರ್ಧಗಂಟೆ ಅಂತರದಲ್ಲಿ ಹಾಗೂ ಕಲಬುರಗಿಯ ಬ್ರಂಗಿಮಠ್ ಕುಟುಂಬದ 9 ಜನರು 1 ಗಂಟೆ ಮುಂಚಿತವಾಗಿ ಸ್ಥಳದಿಂದ ವಾಪಸ್ ಆಗಿದ್ದರಿಂದ ಬಚಾವ್ ಆಗಿದ್ದಾರೆ. ಹಾವೇರಿಯ ವಿರೇಶ್ ದಂಪತಿ, ಶಿಗ್ಗಾಂವಿಯ ನಾಗರಾಜ್ ದಂಪತಿ ಸುರಕ್ಷಿತರಾಗಿದ್ದಾರೆ. ಬಾಗಲಕೋಟೆಯ ಮಾರವಾಡಿ ಗಲ್ಲಿಯ 13 ಜನರು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಇನ್ನೇನು ಪಹಲ್ಗಾಮ್‌ಗೆ ತೆರಳಬೇಕಿತ್ತು. ಅಷ್ಟರಲ್ಲಿ ಮನೆಯವರು ಕರೆ ಮಾಡಿ ಘಟನೆ ಬಗ್ಗೆ ಹೇಳಿದ್ದಾರೆ. ತಕ್ಷಣವೇ ಎಲ್ಲರೂ ಜಮ್ಮು ತಲುಪಿದ್ದಾರೆ.ಇದನ್ನೂ ಓದಿ: 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಪಾಕ್ ಪ್ರಜೆಗಳಿಗೆ ಭಾರತ ವಾರ್ನಿಂಗ್ – ಪಾಕ್ ಸಂಬಂಧಕ್ಕೆ ಎಳ್ಳುನೀರು