ಮಡಿಕೇರಿ: ಕೊರೊನಾ ಮೂರನೇ ಅಲೆ ಹರಡುವ ಅತಂಕದ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆ ಆರಂಭ ಮಾಡುವುದು ಬೇಡ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಮೈಸೂರಿನಲ್ಲಿ ಈಗಾಗಲೇ 500 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಆಗಿದೆ. ಆದರೆ ಮಕ್ಕಳ ಪ್ರಾಣಕ್ಕೆ ತೊಂದರೆ ಅಗಿಲ್ಲ. ಕಳೆದ ತಿಂಗಳು ಮೂವರು ಮಕ್ಕಳು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಹೊರತು ಕೋವಿಡ್ ನಿಂದ ಯಾವುದೇ ಸಮಸ್ಯೆ ಆಗಿಲ್ಲ. ಆದರೂ 3ನೇ ಅಲೆ ದೃಷ್ಟಿಯಲ್ಲಿಟ್ಟುಕೊಂಡು ಸದ್ಯ ಶಾಲೆಗಳನ್ನು ಅರಂಭ ಮಾಡುವುದು ಬೇಡ. ಮೊದಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿ ನಂತರ ಶಾಲೆಗಳನ್ನು ಅರಂಭ ಮಾಡುವುದು ಉತ್ತಮ ಎಂದರು. ಇದನ್ನೂ ಓದಿ: ಆಕ್ಸಿಜನ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲಿದೆ ಕೊಡಗು: ಪ್ರತಾಪ್ ಸಿಂಹ
ಪೋಷಕರಿಂದ ಮಕ್ಕಳಿಗೂ ಸೋಂಕು ಹರಡುತ್ತಿದೆ. ಹೀಗಿರುವಾಗ ವ್ಯಾಕ್ಸಿನ್ ಆಗದ ಹೊರತು ಶಾಲೆ ಆರಂಭ ಬೇಡ. 18 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ಮೊದಲು ವ್ಯಾಕ್ಸಿನ್ ಆಗಲಿ. ಈಗಾಗಲೇ ಭಾರತಕ್ಕೆ ಸ್ಪುಟ್ನಿಕ್ ಮತ್ತು ಫೈಜರ್ ಲಸಿಕೆ ಬಂದಿವೆ. ಮಕ್ಕಳ ಜೀವ ರಕ್ಷಣೆ ಮಾಡಬೇಕಾಗಿರುವುದು ನಮ್ಮ ಮೊದಲ ಕರ್ತವ್ಯವಾಗಿದೆ. ಹೀಗಾಗಿ ವ್ಯಾಕ್ಸಿನ್ ವಿತರಣೆ ಬಳಿಕ ಶಾಲೆ ಆರಂಭಿಸುವುದು ಒಳಿತು. ಒಂದು ವೇಳೆ ವ್ಯಾಕ್ಸಿನ್ ಕೊಡದೆ ಶಾಲೆ ಅರಂಭ ಮಾಡಿದರೆ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.