Connect with us

ಮನೆಗೆ ನಡೆದುಕೊಂಡು ಹೋಗ್ತಿದ್ದ ಐಟಿಐ ವಿದ್ಯಾರ್ಥಿಯ ಬರ್ಬರ ಹತ್ಯೆ!

ಮನೆಗೆ ನಡೆದುಕೊಂಡು ಹೋಗ್ತಿದ್ದ ಐಟಿಐ ವಿದ್ಯಾರ್ಥಿಯ ಬರ್ಬರ ಹತ್ಯೆ!

ಚೆನ್ನೈ: ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು 18 ವರ್ಷದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದ ಭಯಾನಕ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆ ನುಂಗಂಬಕ್ಕಮ್‍ನ ಟ್ಯಾಂಕ್ ಬಂಕ್ ರೋಡಿನಲ್ಲಿ ನಡೆದಿದ್ದು, ಮೃತ ದುರ್ದೈವಿ ಯುವಕನನ್ನು ರಂಜಿತ್ ಎಂದು ಗುರುತಿಸಲಾಗಿದೆ. ಈತ ನಗರದ ಅಪ್ಪು ಸ್ಟ್ರೀಟ್ ನಿವಾಸಿಯಾಗಿದ್ದಾನೆ. ಹತ್ಯೆಯಾದ ಸ್ಥಳದಲ್ಲಿ ಮೃತನ ಐಡಿ ಕಾರ್ಡ್ ದೊರೆತಿದ್ದು, ಅದರಲ್ಲಿ ಆತ ಗಿಂಡಿ ಇಂಡಸ್ಟ್ರಿಯಲ್ ಎಸ್ಟೇಟ್ ಕ್ಯಾಂಪಸ್‍ನಲ್ಲಿನ ಐಟಿಐ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಎಂಬುದಾಗಿ ತಿಳಿದುಬಂದಿದೆ.

ಏನಿದು ಘಟನೆ?: ಶುಕ್ರವಾರ ಸಂಜೆ 7.30ರ ಸುಮಾರಿಗೆ ಮನೆಗೆ ಕರೆ ಮಾಡಿದ ರಂಜಿತ್, ಅಮ್ಮ ಚೆನ್ನೈ ಬೀಚ್ ಬಳಿ ರೈಲು ಹತ್ತಿದ್ದಾರೆ. ಅವರು ಬೇಗ ಬರುತ್ತಾರೆ. ಆದ್ರೆ ನಾನು ಬರೋದು ಸ್ವಲ್ಪ ತಡವಾಗುತ್ತದೆ ಅಂತ ತಿಳಿಸಿದ್ದಾನೆ. ಆದ್ರೆ ಆ ಬಳಿಕ 12.45ರ ಸುಮಾರಿಗೆ ಮಂಗಲ್ ನಗರ ನಿವಾಸಿ ಶೇಕ್ ಮೊಹಮ್ಮದ್ ಎಂಬವರು ರಂಜಿತ್ ಮನೆಗೆ ಕರೆ ಮಾಡಿ ಆತ ಸಾವನ್ನಪ್ಪಿರುವ ವಿಚಾರ ತಿಳಿಸುತ್ತಾರೆ.

ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ ತನ್ನ ಕತ್ತು ಹಿಡಿದು ಓಡುತ್ತಿರುವುದು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ತೀವ್ರ ಹಲ್ಲೆಗೊಳಗಾಗಿದ್ದ ರಂಜಿತ್ ತನ್ನ ಕುತ್ತಿಗೆಯಲ್ಲಿ ರಕ್ತ ಹರಿಯುತ್ತಿದ್ದಂತೆಯೆ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡು ಸುಮಾರು 50 ಮೀಟರ್ ದೂರ ಓಡಿದ್ದಾನೆ. ಕೆಲ ದೂರ ಓಡಿದ ನಂತ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಅಲ್ಲದೇ ಎರಡು ಬೈಕ್ ಗಳಲ್ಲಿ ನಾಲ್ವರು ದುಷ್ಕರ್ಮಿಗಳು ಆತನನ್ನು ಫಾಲೋ ಮಾಡುವುದು ದೃಶ್ಯದಲ್ಲಿ ಕಾಣುತ್ತದೆ. ಆ ನಾಲ್ವರೇ ರಂಜಿತ್ ನನ್ನು ಹತ್ಯೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಂಜಿತ್ ನನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯುವಕನ್ನು ಸ್ಥಳೀಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ರಂಜಿತ್ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗಿಂದಲೇ ದುಷ್ಕರ್ಮಿಗಳು ಫಾಲೋ ಮಾಡಿದ್ದಾರೆ. ಬಳಿಕ ಆತ ನುಂಗಂಬಕ್ಕಮ್ ರೈಲ್ವೇ ಸ್ಟೇಷ್ ನಲ್ಲಿ ಇಳಿದು ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಫಾಲೋ ಮಾಡಿ ಈ ಕೃತ್ಯ ಎಸಗಿರಬಹುದು ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರೀತಿ ಪ್ರೇಮದ ವಿಚಾರವಾಗಿ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತಂಡ ಈ ಕೃತ್ಯ ಎಸಗಿರಬಹುದೆಂದು ಮತ್ತೊಬ್ಬ ಅಧಿಕಾರಿ ಶಂಕಿಸಿದ್ದಾರೆ. ಒಟ್ಟಿನಲ್ಲಿ ಪ್ರಕರಣದ ಜಾಡು ಹಿಡಿದ ಪೊಲೀಸರು ರಂಜಿತ್ ಗೆ ಯಾವುದಾದರೂ ಜೀವ ಬೆದರಿಕೆಗಳು ಬಂದಿವೆಯೇ ಎಂದು ಆತನ ಗೆಳೆಯರನ್ನು ವಿಚಾರಣೆ ಮಾಡುತ್ತಿದ್ದಾರೆ.

ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಸಿಸಿಟಿವಿ ದೃಶ್ಯವನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೇ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

Advertisement
Advertisement