– ಪತಿ, ಮಗ ಮನೆಯಿಂದ ಹೋಗ್ತಿದ್ದಂತೆ ಬಾವಿಗೆ ಹಾರಿದ್ರು
ಹೈದರಾಬಾದ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆ ತನ್ನ ಮಗಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಯೆರ್ರಪಹಾದ್ ಗ್ರಾಮದಲ್ಲಿ ನಡೆದಿದೆ.
ಲಿಂಗಮಣಿ (40) ಮತ್ತು ಸಿರೀಶಾ (18) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಮೃತ ಲಿಂಗಮಣಿ ಪತಿ ಲಕ್ಷ್ಮರೆಡ್ಡಿ ಮತ್ತು ಮಗ ರಣ್‍ದೀಪ್ ರೆಡ್ಡಿ ಇಬ್ಬರು ಮನೆಯಿಂದ ಹೊರಗೆ ಹೋದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮೃತ ಲಿಂಗಮಣಿ ಕುಟುಂಬ ಹೊಸ ಮನೆ ನಿರ್ಮಾಣ ಮಾಡಿದ್ದು, ಅದಕ್ಕಾಗಿ ಕುಟುಂಬವು 7 ಲಕ್ಷ ಸಾಲವನ್ನು ಪಡೆದುಕೊಂಡಿದೆ. ಆದರೆ ಲಕ್ಷ್ಮರೆಡ್ಡಿ ಮತ್ತು ರಣ್‍ದೀಪ್ ರೆಡ್ಡಿ ಯಾವುದೇ ಕೆಲಸ ಮಾಡದೆ ಮನೆಯಲ್ಲಿಯೇ ಇರುತ್ತಿದ್ದರು. ಇದರಿಂದ ಕೋಪಗೊಂಡ ಲಿಂಗಮಣಿ ಕೆಲಸ ಮಾಡದಿದ್ದರೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಜಗಳ ಮಾಡಿದ್ದಾರೆ. ಜಗಳದ ನಂತರ ಪತಿ ಮತ್ತು ಮಗ ಜಮೀನಿಗೆ ಹೋಗಿದ್ದಾರೆ ಎಂದು ಸಬ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಹೇಳಿದ್ದಾರೆ.
ಜಗಳದಿಂದ ಬೇಸರಗೊಂಡ ಲಿಂಗಮಣಿ ತನ್ನ 18 ವರ್ಷದ ಮಗಳ ಜೊತೆ ಜಮೀನಿನಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿಂದ ಮನೆಗೆ ವಾಪಸ್ ಬಂದಾಗ ಪತ್ನಿ ಮತ್ತು ಮಗಳು ಕಾಣಲಿಲ್ಲ. ನಂತರ ಲಕ್ಷ್ಮರೆಡ್ಡಿ ಎಲ್ಲಾ ಕಡೆ ಹುಡುಕಾಡಿದ್ದಾನೆ. ಆಗ ಬಾವಿಯಲ್ಲಿ ಮೃತದೇಹಗಳು ಕಂಡುಬಂದಿದೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಕುಟುಂಬ ಸದಸ್ಯರು ಕುಳಿತು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರೆ, ಈ ಅನಾಹುತ ನಡೆಯುತ್ತಿರಲಿಲ್ಲ ಎಂದು ಎಸ್‍ಐ ತಿಳಿಸಿದ್ದಾರೆ.