– ಪಾಕ್ ಜೈಲಿನಲ್ಲಿದ್ದ ಮಹಿಳೆ
ಮುಂಬೈ: 18 ವರ್ಷ ಪಾಕ್ ಜೈಲಿನಲ್ಲಿದ್ದ 65 ವರ್ಷದ ಮಹಿಳೆ ಕೊನೆಗೂ ತಾಯ್ನಾಡಿಗೆ ಮರಳಿದ್ದಾರೆ. ಮಹಾರಾಷ್ಟ್ರದ ಔರಂಗಬಾದ್ ನಗರಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ಮತ್ತು ಕುಟುಂಬಸ್ಥರು ಮಹಿಳೆಯನ್ನ ಆತ್ಮೀಯವಾಗಿ ಬರಮಾಡಿಕೊಂಡರು.
ಹಸೀನಾ ಬೇಗಂ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿರಿಯ ಜೀವ. 2002ರಲ್ಲಿ ಪತಿಯ ಕುಟುಂಬಸ್ಥರ ಭೇಟಿಯಾಗಿ ಹಸೀನಾ ಬೇಗಂ ಪಾಕಿಸ್ತಾನಕ್ಕೆ ತೆರಳಿದ್ದರು. ಆದ್ರೆ ಪಾಸ್‍ಪೋರ್ಟ್ ಕಳೆದುಕೊಂಡ ಪರಿಣಾಮ ಹಸೀನಾ 18 ವರ್ಷ ಪಾಕ್ ಜೈಲಿನಲ್ಲಿರಬೇಕಾಯ್ತು.
Advertisement
Advertisement
ಔರಂಗಾಬಾದ್ ತಲುಪಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹಸೀನಾ ಬೇಗಂ, ಪಾಕಿಸ್ತಾನದಲ್ಲಿ ಬಹಳ ಕಷ್ಟದ ದಿನಗಳನ್ನ ಕಳೆದಿದ್ದೇನೆ. ಪ್ರತಿ ದಿನವೂ ಆತಂಕ ಮತ್ತು ಭಯದಿಂದ ಕೂಡಿರುತ್ತಿತ್ತು. ಭಾರತಕ್ಕೆ ಹಿಂದಿರುಗಿದ್ದರಿಂದ ಶಾಂತಿ ಸಿಕ್ಕಿದೆ. ಸ್ವರ್ಗಕ್ಕೆ ಬಂದಂತ ಅನುಭವ ನನಗಾಗುತ್ತಿದೆ. ಪಾಕಿಸ್ತಾನದ ಅಧಿಕಾರಿಗಳು ನನ್ನನ್ನು ಬಲವಂತವಾಗಿ ಜೈಲಿನಲ್ಲಿರಿಸಿದ್ದರು. ನನ್ನನ್ನ ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಂಡ ಔರಂಗಬಾದ್ ಪೊಲೀಸರಿಗೆ ಧನ್ಯವಾದ ಸಲ್ಲಿಸಿ ಭಾವುಕರಾದರು.
Advertisement
Advertisement
ಪಾಸ್‍ಪೋರ್ಟ್ ಮಿಸ್: ಔರಂಗಬಾದ್ ಸಿಟಿಯ ರಶೀದಾಪುರ ನಿವಾಸಿಯಾಗಿರುವ ಹಸೀನಾರ ಮದುವೆ ಉತ್ತರ ಪ್ರದೇಶದ ಸಹರನ್ಪುರ ಮೂಲದ ದಿಲ್‍ಶಾದ್ ಜೊತೆ ನಡೆದಿತ್ತು. 2002ರಲ್ಲಿ ಪಾಕಿಸ್ತಾನದಲ್ಲಿರುವ ಪತಿಯ ಸಂಬಂಧಿಕರ ಭೇಟಿಗಾಗಿ ತೆರಳಿದ್ದರು. ಲಾಹೋರ್ ನಲ್ಲಿ ಹಸೀನಾ ತಮ್ಮ ಪಾಸ್‍ಪೋರ್ಟ್ ಕಳೆದುಕೊಂಡಿದ್ದರು. ಪಾಸ್‍ಪೋರ್ಟ್ ಕಳೆದುಕೊಂಡ ನಂತರ ಸ್ಥಳೀಯ ಪೊಲೀಸರ ಸಹಾಯ ಕೇಳಿದ್ದರು. ಆದ್ರೆ ಅಕ್ರಮವಾಗಿ ಗಡಿ ಪ್ರವೇಶಿಸಿದ್ದಾರೆಂದು ಆರೋಪಿಸಿ ಹಸೀನಾರನ್ನ ಜೈಲಿನಲ್ಲಿರಿಸಲಾಗಿತ್ತು.
ನ್ಯಾಯಾಲಯದ ಮೊರೆ: ಕೆಲ ವರ್ಷಗಳ ಹಿಂದೆ ತಮ್ಮನ್ನ ಭಾರತಕ್ಕೆ ಕಳುಹಿಸಿಕೊಡುವಂತೆ ಹಸೀನಾ ಪಾಕಿಸ್ತಾನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪಾಕ್ ನ್ಯಾಯಾಲಯ ಹಸೀನಾ ಮೂಲಸ್ಥಾನ ಮತ್ತು ಪಾಕ್ ಪ್ರಯಾಣದ ಮಾಹಿತಿಯನ್ನ ಔರಂಗಬಾದ್ ಪೊಲೀಸರಿಗೆ ಕೇಳಿತ್ತು. ಪೊಲೀಸರು ಹಸೀನಾ ಭಾರತದವರು ಮತ್ತು ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದರು.
ಮೂರು ದಿನಗಳ ಹಿಂದೆ ಪಾಕ್ ನ್ಯಾಯಾಲಯ ಹಸೀನಾರನ್ನ ಬಿಡುಗಡೆಗೊಳಿಸಿ ಭಾರತಕ್ಕೆ ಕಳುಹಿಸುವಂತೆ ಆದೇಶಿಸಿತ್ತು. ಮಂಗಳವಾರ ಪಂಜಾಬ್ ಮಾರ್ಗವಾಗಿ ಹಸೀನಾರನ್ನ ಭಾರತಕ್ಕೆ ಕಳುಹಿಸಲಾಗಿತ್ತು. ಇಂದು ಹಸೀನಾ ಔರಂಗಬಾದ್ ತಲುಪಿದ್ದಾರೆ.