ಬೆಂಗಳೂರು: 18 ರಿಂದ 45 ವರ್ಷದೊಳಗಿನವರಿಗಾಗಿ ಹಂತ ಹಂತವಾಗಿ ಲಸಿಕೆ ನೀಡಲಾಗುವುದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಇಡೀ ದೇಶವೇ ಇಂದು ಕೋವಿಡ್ 19ರ ಸೋಂಕಿನ ಸವಾಲನ್ನು ಎದುರಿಸುತ್ತಿದೆ. ಸರ್ಕಾರ ಹಾಗೂ ಸಮಾಜ ಜೊತೆಯಾಗಿ ಈ ಸೋಂಕಿನ ವಿರುದ್ಧ ಹೋರಾಡುತ್ತಿವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
Advertisement
ಹೇಳಿಕೆಯಲ್ಲಿ ಏನಿದೆ?
ಭಾರತದಂತಹ ಅತಿ ಜನ ಸಾಂದ್ರತೆಯ ವಿಶಾಲವಾದ ದೇಶದಲ್ಲಿ ಕೋವಿಡ್ ನಂತಹ ಸೋಂಕು ಹರಡುವುದು ಅತಿ ಸಹಜ. ಆದರೂ ನಾವು ಮೊದಲ ಅಲೆಯನ್ನು ಕನಿಷ್ಠ ನಷ್ಟದೊಂದಿಗೆ ಮೆಟ್ಟಿ ನಿಂತಿದ್ದೇವೆ. ಆದರೆ ಎರಡನೇ ಅಲೆ ನಮ್ಮ ಸಾಮರ್ಥ್ಯದ ಎಲ್ಲೆಯನ್ನು ಪರೀಕ್ಷಿಸುತ್ತಿದೆ.
Advertisement
ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಮ್ಲಜನಕ, ವೈದ್ಯಕೀಯ ಉಪಕರಣಗಳ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ನಡೆದರೂ, ಅದನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ.
Advertisement
ಕೋವಿಡ್ ಸಂಕಷ್ಟದಿಂದ ಪಾರಾಗಲು ದೊರೆತಿರುವ ಪ್ರಮುಖ ಅಸ್ತ್ರ ಲಸಿಕೆ. ವಿಜ್ಞಾನಿಗಳು ಹಾಗೂ ಔಷಧ ಕಂಪೆನಿಗಳ ಪರಿಶ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಿ ನೇತೃತ್ವದ ಭಾರತ ಸರ್ಕಾರದ ಬೆಂಬಲದೊಂದಿಗೆ ಭಾರತವು ಸ್ವದೇಶೀ ಲಸಿಕೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿ.
ಈ ವರೆಗೆ ಲಸಿಕೆ ಅಭಿಯಾನ ಮೂರು ಹಂತಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಎರಡನೇ ಹಂತದಲ್ಲಿ ಮುಂಚೂಣಿಯಲ್ಲಿರುವ ಕೊರೊನಾ ಯೋಧರು ಹಾಗೂ ಮೂರನೇ ಹಂತದಲ್ಲಿ 45 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಈ ಮೂರು ಹಂತಗಳಲ್ಲಿ ಈ ವರೆಗೆ ಕೇಂದ್ರದಿಂದ 99.40 ಲಕ್ಷ ಲಸಿಕೆಯ ಡೋಸ್ ಗಳು ಲಭ್ಯವಾಗಿದ್ದು, 93.5 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. ಇನ್ನೂ ಅಂದಾಜು 5.9 ಲಕ್ಷ ಡೋಸ್ ಗಳು ಲಭ್ಯವಿದೆ.
ಲಸಿಕೆ ಅಭಿಯಾನ ಯಾವುದೇ ಅಡೆತಡೆಗಳಿಲ್ಲದೆ ನಿರಂತರವಾಗಿ ನಡೆಯುತ್ತಿದ್ದು, ಇದಕ್ಕಾಗಿ ಎಲ್ಲ ಆಸ್ಪತ್ರೆಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಲಸಿಕೆ ಪಡೆದುಕೊಂಡವರು ಎಲ್ಲರೂ ಅಭಿನಂದನಾರ್ಹರು.
ನಾಲ್ಕನೇ ಹಂತದಲ್ಲಿ ಇದೀಗ ದೇಶದ ಜನಸಂಖ್ಯೆಯ ಅತಿದೊಡ್ಡ ಸಮೂಹದ ಲಸಿಕೆ ಕಾರ್ಯಕ್ರಮದ ಸಮಯ ಸನ್ನಿಹಿತವಾಗಿದೆ. ಕೇಂದ್ರ ಸರ್ಕಾರವು ಹಲವು ರಾಜ್ಯಗಳ ಮನವಿಯಂತೆ ಲಸಿಕೆ ಖರೀದಿ ಹಾಗೂ ಅನುಷ್ಠಾನವನ್ನು ರಾಜ್ಯಗಳ ವಿವೇಚನೆಗೆ ಮುಕ್ತಗೊಳಿಸಿದೆ.
ರಾಜ್ಯ ಸರ್ಕಾರವು 1 ಕೋಟಿ ಡೋಸ್ ಗಳಷ್ಟು ಲಸಿಕೆ ಖರೀದಿಗೆ ಮುಂದಾಗಿದೆ. ಹೆಚ್ಚುವರಿಯಾಗಿ ಮತ್ತೂ ಒಂದು ಕೋಟಿ ಲಸಿಕೆ ಖರೀದಿಗೆ ಕಾರ್ಯಾದೇಶ ನೀಡಲಾಗುತ್ತಿದೆ. ನಾಲ್ಕನೇ ಹಂತದ ಲಸಿಕಾ ಅಭಿಯಾನವನ್ನು ಹಂತ ಹಂತವಾಗಿ ನಡೆಸಲಾಗುವುದು. ಔಷಧ ಕಂಪೆನಿಗಳು ಹೆಚ್ಚಿರುವ ಈ ಬೇಡಿಕೆಗೆ ತಕ್ಕಂತೆ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ.
ಮೂರನೇ ಲಸಿಕೆಯೂ ಶೀಘ್ರವೇ ಲಭ್ಯವಾಗಲಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಲಭ್ಯತೆಯ ಆಧಾರದಲ್ಲಿ ಲಸಿಕಾ ಅಭಿಯಾನ ಮುಂದುವರೆಯಲಿದೆ. ಈ ಅಭಿಯಾನವು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಹಾಗೂ ಸುಗಮವಾಗಿ ನಡೆಯುವುದನ್ನು ಖಾತರಿ ಪಡಿಸುವ ಗುರಿಯೊಂದಿಗೆ ಕಾರ್ಯಕ್ರಮ ರೂಪಿಸಲಾಗುವುದು. ಆ ಮೂಲಕ ಕೋವಿಡ್ ವಿರುದ್ಧದ ಸಮರದಲ್ಲಿ ನಾವು ಮೇಲುಗೈ ಸಾಧಿಸುವ ವಿಶ್ವಾಸ ನನಗಿದೆ.