– ಮಾಜಿ ಪ್ರಧಾನಿಗಳಿಲ್ಲದ ಮೊದಲ ಸೆಷನ್
ನವದೆಹಲಿ: ಇಂದಿನಿಂದ 17 ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. ಸೋಲಿನ ಆಘಾತದಿಂದ ಹೊರಬರದ ಸ್ಥಿತಿಯಲ್ಲಿರುವ ಪ್ರತಿಪಕ್ಷ ನಾಯಕರ ನಿರಾಸಕ್ತಿ ನಡುವೆ ಕಲಾಪ ಆರಂಭವಾಗಲಿದ್ದು, ಇಂದು ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Advertisement
ಜುಲೈ 26ರವರೆಗೆ ಒಟ್ಟು 40 ದಿನಗಳ ಕಾಲ ನಡೆಯುವ ಅಧಿವೇಶನಲ್ಲಿ ಮೊದಲೆರಡು ದಿನ ನೂತನ ಸಂಸದರಿಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ವಿರೇಂದ್ರ ಕುಮಾರ್ ಇಂದಿನಿಂದ ಎಲ್ಲಾ ನೂತನ ಸಂಸದರಿಗೆ ಪ್ರಮಾಣವಚನ ಭೋದಿಸಲಿದ್ದಾರೆ. ಇದೇ ತಿಂಗಳ 19ರಂದು ಸ್ಪೀಕರ್ ಹುದ್ದೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 20ರಂದು ಸಂಸತ್‍ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ. ಜುಲೈ 4ರಿಂದ ಪ್ರಶ್ನೋತ್ತರ ಕಲಾಪ ಆರಂಭವಾಗಲಿದೆ.
Advertisement
Advertisement
ಸುಗಮ ಕಲಾಪಕ್ಕೆ ಪ್ರಧಾನಿ ಮನವಿ:
17ನೇ ಲೋಕಸಭೆಗೆ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರ ಭಾನುವಾರ ಸಂಸತ್ ಭವನದಲ್ಲಿ ಸರ್ವಪಕ್ಷ ನಾಯಕರ ಕರೆಯಲಾಗಿತ್ತು. ಸಭೆಯಲ್ಲಿ ಸಂಸತ್ ಅಧಿವೇಶನ ಸುಗಮವಾಗಿ ನಡೆಸಲು ಪ್ರತಿಪಕ್ಷಗಳು ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ ಬಜೆಟ್ ಮಂಡನೆಯ ಜೊತೆಗೆ ತ್ರಿವಳಿ ತಲಾಖ್ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಮಂಡನೆ ಆಗಲಿದ್ದು, ಕಾವೇರಿದ ಚರ್ಚೆಗೆ ಕಾರಣವಾಗಲಿದೆ.
Advertisement
ಸಂಸತ್‍ನಲ್ಲಿ ಗಟ್ಟಿಧ್ವನಿ ಕೇಳಲ್ಲ:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಹಾಗೂ ಮುತ್ಸದ್ಧಿ ರಾಜಕಾರಣಿಗಳು ಸೋಲನುಭವಿಸಿದ್ದಾರೆ. ಈ ಬಾರಿ ಬಹುತೇಕ ಸಂಸದರು ಮೊದಲ ಬಾರಿ ಸಂಸತ್ ಪ್ರವೇಶ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಹೆಚ್.ಡಿ ದೇವೇಗೌಡ, ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್, ಸಂಸತ್ ಕಲಾಪವನ್ನು ತಪ್ಪಿಸಿಕೊಂಡ ಹಿರಿಯರೆನಿಸಿದ್ದಾರೆ. ಮೊದಲ ಅಧಿವೇಶನಕ್ಕೆ ವಿಪಕ್ಷಗಳ ನಿರಾಸಕ್ತಿ ಎದ್ದು ಕಾಣುತ್ತಿದೆ. ಮೊದಲ ದಿನ ಆಡಳಿತ ಪಕ್ಷವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ವಿಪಕ್ಷ ಇನ್ನೂ ಯಾವುದೇ ಕಾರ್ಯತಂತ್ರ ರೂಪಿಸಿಲ್ಲ. ಇದರ ಜೊತೆಗೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಸಂಸತ್ತಿನಲ್ಲಿ ತನ್ನ ವಿಪಕ್ಷ ನಾಯಕನನ್ನು ಘೋಷಣೆ ಮಾಡದೆ ಇರುವುದು ವಿಪಕ್ಷಗಳ ನಿರಾಸಕ್ತಿ ಎದ್ದು ಕಾಣಿಸುವಂತೆ ಮಾಡಿದೆ.