– ಉಗ್ರರಿಗೆ ಸ್ಥಳೀಯ ಮಟ್ಟದಲ್ಲಿ ಸಹಾಯ ಮಾಡುತ್ತಿದ್ದ ಹಿನ್ನೆಲೆ ವಶಕ್ಕೆ
– 24 ಗಂಟೆಯಲ್ಲಿ ಐವರು ಉಗ್ರರ ಮನೆ ಧ್ವಂಸ
ಶ್ರೀನಗರ: ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನೆತ್ತರು ಹರಿಸಿದ್ದ ಉಗ್ರರ ವಿರುದ್ಧ ಭಾರತೀಯ ಸೇನೆಯ (Indian Army) ಕಾರ್ಯಾಚರಣೆ ಶುರುವಾಗಿದೆ. ಕುಲ್ಗಾಮ್ ಜಿಲ್ಲೆಯ ಮುತಲ್ಹಾಮಾ ಗ್ರಾಮದಲ್ಲಿ ಉಗ್ರ ಝಾಕೀರ್ ಅಹ್ಮದ್ ಗಣಿ, ಶೋಪಿಯಾನ್‌ನ ಚೋಟಿಪೋರಾ ಗ್ರಾಮದಲ್ಲಿ ಎಲ್‌ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಉಗ್ರನ ಮನೆಯನ್ನು ನೆಲಸಮಗೊಳಿಸಲಾಗಿದೆ. ಪುಲ್ವಾಮಾದ ಮರ‍್ರಾನ್ ಪ್ರದೇಶದಲ್ಲಿ ಅಹ್ಸಾನ್ ಉಲ್ ಹಕ್ ಮನೆ ಸ್ಫೋಟಿಸಿ ನಿನ್ನೆಯಷ್ಟೇ ನೆಲಸಮ ಮಾಡಲಾಗಿತ್ತು.
ಇನ್ನೂ ಉಗ್ರರಿಗೆ ಹಣಕಾಸು ಸಹಾಯ ಮಾಡಿರುವ ಶಂಕೆಯಲ್ಲಿ ಅನಂತನಾಗ್ (Anantnag) ಜಿಲ್ಲೆಯಲ್ಲಿ 175 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ ಕುಪ್ವಾರದಲ್ಲಿ ಕೂಂಬಿಂಗ್ ವೇಳೆ 8 ಎಕೆ 47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಲಂಡನ್‌ನಲ್ಲಿ ಭಾರತೀಯರ ಪ್ರತಿಭಟನೆ ವೇಳೆ ಕತ್ತು ಕೊಯ್ಯುವ ಸನ್ನೆ ಮಾಡಿದ ಪಾಕ್ ಅಧಿಕಾರಿ
ಇನ್ನೂ ಪಾಕಿಸ್ತಾನ ಪ್ರಜೆಗಳು ದೇಶ ತೊರೆಯಲು ಕೇಂದ್ರ ಸರ್ಕಾರ 48 ಗಂಟೆ ಗಡುವು ನೀಡಿತ್ತು. ಈ ಬೆನ್ನಲ್ಲೇ ಭಾರತಕ್ಕೆ ಭೇಟಿ ನೀಡಿದ ಒಟ್ಟು 191 ಪಾಕಿಸ್ತಾನಿ ಪ್ರಜೆಗಳು ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಭೂಮಾರ್ಗದ ಮೂಲಕ ವಾಪಸ್ ಮರಳಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ 287 ಭಾರತೀಯ ಪ್ರಜೆಗಳು ಸಹ ಹಿಂತಿರುಗಿದ್ದಾರೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದಲ್ಲಿರುವ 98 ಜನ ಪಾಕಿಸ್ತಾನ ಪ್ರಜೆಗಳಿಗೂ ದೇಶ ತೊರೆಯುವಂತೆ ಸೂಚಿಸಲಾಗಿದೆ.
ಈ ಮಧ್ಯೆ, ವಾಘಾ ಗಡಿ ಬಂದ್ ಆದ ಕಾರಣ ಪಾಕ್ ವಧು-ರಾಜಸ್ಥಾನದ ವರ ಮದುವೆ ಅತಂತ್ರಗೊಂಡಿದೆ. ಈ ಮಧ್ಯೆ, ಉಗ್ರರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರಿದಿವೆ. ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್, ವಿಮಾನಗಳ ಹಾರಾಟ ಸ್ಥಗಿತ