ತಿರುವನಂತಪುರಂ: ಸಾಧನೆ ಮಾಡಲು ಮನಸ್ಸು ಇದ್ದರೆ ಸಾಕು ಯಾವುದೇ ಅಡ್ಡಿಗಳನ್ನು ಹಿಮ್ಮೆಟ್ಟಿ ಗುರಿ ತಲುಪಬಹುದು ಎನ್ನುವುದಕ್ಕೆ ಕೇರಳದ ಕೋಝಿಕೋಡ್ ಮೂಲದ 17 ವರ್ಷದ ಯುವತಿ ಉದಾಹರಣೆಯಾಗಿದ್ದಾರೆ. ಅಂಗವೈಕಲ್ಯವಿದ್ದರು ತನ್ನ ಪ್ರತಿಭೆ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
ಕೋಝಿಕೋಡ್ ಮೂಲದವರಾದ ನೂರ್ ಜಲೀಲಾ ಅಂಗವಿಕಲೆಯಾಗಿ ಜನಿಸಿದ್ದರೂ, ತನ್ನ ಹಾದಿಗೆ ಅಂಗವೈಕಲ್ಯ ಯಾವತ್ತೂ ಕೂಡ ಅಡ್ಡಿಯಾಗಲೇ ಇಲ್ಲ ಅನ್ನೋದಕ್ಕೆ ಸ್ಪಷ್ಟ ನಿದರ್ಶನವಾಗಿದ್ದಾರೆ.
ಹುಟ್ಟಿನಿಂದಲೂ ಜಲೀಲಾಗೆ ಮುಂದೋಳು, ಕಾಲುಗಳು ಇಲ್ಲ. ಆದರೆ ಮೈಕ್ ಹಿಡಿದು ಮಾತಿಗೆ ನಿಂತರೆ ಸಭೆಯಲ್ಲಿ ಇದ್ದವರು ಮಂತ್ರಮುಗ್ಧವಾಗುವಂತೆ ವಾಕ್ಚಾತುರ್ಯ ಹೊಂದಿದ್ದಾರೆ. ಸಾಮಾಜಿಕ ಹೋರಾಟಗಾರ್ತಿಯಾಗಿ ಸಾಮಾಜ ಸೇವೆ ಜೊತೆಗೆ ಪ್ರೇರಣಾ ಭಾಷಣಗಳನ್ನು ಮಾಡಿ, ಹಲವರಿಗೆ ಸ್ಪೂರ್ತಿ ಆಗಿದ್ದಾರೆ. ವಯೊಲಿನ್ ಹಿಡಿದು ನುಡಿಸಲು ನಿಂತರೆ ಕೇಳುಗರನ್ನು ಸಂಗೀತ ಸುಧೆಯಲ್ಲಿ ತೇಲುವಂತೆ ಮಾಡುತ್ತಾರೆ. ಹಾಡು, ಚಿತ್ರಕಲೆ, ಭಾಷಣ ಮಾಡುವುದು ಹೀಗೆ ಬಹುಮುಖ ಪ್ರತಿಭೆಯನ್ನು ಜಲೀಲಾ ಹೊಂದಿದ್ದಾರೆ.
ಚಿಕ್ಕ ವಯಸ್ಸಿನಲ್ಲಿದ್ದಾಗ ಒಂದು ದಿನ ಜಲೀಲಾ ಪುಸ್ತಕದಲ್ಲಿ ಬಣ್ಣ ಹಚ್ಚುತ್ತಿದ್ದರು. ಇದನ್ನು ನೋಡಿದ ಪೋಷಕರು ಮಗಳಿಗೆ ಪ್ರೋತ್ಸಾಹಿಸಿದರು. ಆಕೆಗೆ ಕಲೆಯನ್ನು ಮುಂದುವರಿಸಲು ಸಹಕರಿಸಿದರು. ಬಳಿಕ 7ನೇ ತರಗತಿಯಲ್ಲಿದ್ದಾಗ ವಯೊಲಿನ್ ನುಡಿಸುವುದನ್ನು ಕಲಿತು, ಚಿತ್ರಕಲೆ ಜೊತೆಗೆ ಸಂಗೀತವನ್ನು ಕರಗತ ಮಾಡಿಕೊಂಡು ಹಲವಾರು ಸ್ಪರ್ಧೆಗಳಲ್ಲಿ ಗೆದ್ದು ಜಲೀಲಾ ಕೀರ್ತಿ ಗಳಿಸಿದ್ದಾರೆ.
ಸದ್ಯ ಎನ್‍ಜಿಓ ಜೊತೆಗೆ ಕೈಜೋಡಿಸಿರುವ ಜಲೀಲಾ, ತಮ್ಮಂತೆ ಅಂಗವಿಕಲರಾಗಿರುವ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಜಲೀಲಾರ ಈ ಹುಮ್ಮಸ್ಸು, ಪ್ರತಿಭೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಅಮೆರಿಕದ ನಾಸಾಗೆ ಭೇಟಿ ನೀಡಬೇಕು, ಮೌಂಟ್ ಎವರೆಸ್ಟ್ ಹತ್ತುಬೇಕು ಎಂಬುದು ನನ್ನ ಕನಸು ಎಂದು ಜಲೀಲಾ ಹೇಳಿಕೊಂಡಿದ್ದಾರೆ.
ಎಲ್ಲಾ ಸರಿಯಿದ್ದರೂ ಕೂಡ ಕೆಲವರು ನಮ್ಮ ಕೈಯಲ್ಲಿ ಏನೂ ಆಗಲ್ಲ ಎಂದು ತಮ್ಮ ಕನಸಿಗೆ ಬೀಗ ಹಾಕಿಟ್ಟುಕೊಂಡು ಸುಮ್ಮನಾಗಿ ಬಿಡುತ್ತಾರೆ. ಆದರೆ ಮುಂದೋಳು, ಕಾಲುಗಳು ಇಲ್ಲದಿದ್ದರೂ ಜೀವನದಲ್ಲಿ ಹತಾಶರಾಗದೆ ತಮ್ಮಗಿದ್ದ ಸಮಸ್ಯೆಯನ್ನು ಹಿಮ್ಮೆಟ್ಟಿ ಅನೇಕರಿಗೆ ಜಲೀಲಾ ಸ್ಪೂರ್ತಿಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಧಕರ ಪಟ್ಟಿಗೆ ಸೇರಿದ್ದಾರೆ.