– ಕೇಸ್ ದಾಖಲಾಗ್ತಿದ್ದಂತೆ ತಲೆ ಮರೆಸಿಕೊಂಡ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ
– 32 ವಿದ್ಯಾರ್ಥಿನಿಯರ ಹೇಳಿಕೆ ದಾಖಲು
ನವದೆಹಲಿ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಹಲವಾರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ (Chaitanyananda Saraswati Swamiji) ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದೇ ಆಗಸ್ಟ್ 4ದಂದು ವಸಂತ್ ಕುಂಜ್ ಉತ್ತರ ಪೊಲೀಸ್ (Vasant Kunj North Police) ಠಾಣೆಯಲ್ಲಿ 17 ವಿದ್ಯಾರ್ಥಿನಿಯರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್‌ನ ನಿರ್ವಹಣಾ ಸಮಿತಿಯ ಸದಸ್ಯರೂ ಆಗಿರುವ ಆರೋಪಿಯು ಈ ಪ್ರಕರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದಾನೆ. ಈತನ ಕ್ರಿಮಿನಲ್ ಹಿನ್ನೆಲೆ ಕೆದಕಿದಾಗ 2009 ಮತ್ತು 2016 ರಲ್ಲಿ ಸ್ವಾಮೀಜಿ ವಿರುದ್ಧ ಎರಡು ಲೈಂಗಿಕ ಕಿರುಕುಳದ ದೂರು ದಾಖಲಾಗಿವೆ ಅನ್ನೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: 17 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ – ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ FIR
ವಿದ್ಯಾರ್ಥಿನಿಯರ ದೂರು ಏನು?
ಸ್ವಾಮಿ ಚೈತನ್ಯಾನಂದ ಸರಸ್ವತಿ ಪಾರ್ಥ ಸಾರಥಿ, ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದಡಿಯಲ್ಲಿ ಪಿಜಿಡಿಎಂ ಕೋರ್ಸ್‌ಗಳನ್ನು ಕಲಿಯುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ ಅಶ್ಲೀಲ ಭಾಷೆಯನ್ನು ಬಳಸಿ ನಿಂದಿಸುತ್ತಿದ್ದರು, ಮತ್ತು ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನ ಕಳಿಸುತ್ತಿದ್ದರು. ಅಲ್ಲದೇ ದೈಹಿಕ ಸಂಪರ್ಕಕ್ಕೂ ಪ್ರಯತ್ನಿಸಿದ್ದರು. ಸಂಸ್ಥೆಯಲ್ಲಿನ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಅವರ ಬೇಡಿಕೆ ಈಡೇರಿಸುವಂತೆ ಮಹಿಳಾ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದಾಗಿ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು, 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ಪೈಕಿ 17 ಮಂದಿ ತಮ್ಮ ಮೇಲೆ ನಿಂದನೆಯ ಭಾಷೆ ಬಳಸಿದ್ದಾರೆ, ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಇದಕ್ಕೆ ನಾವು ವಿರೋಧ ಮಾಡಿದಾಗ ಕೆಲ ಮಹಿಳಾ ಅಧ್ಯಾಪಕರು ಹಾಗೂ ಆಡಳಿತಾಧಿಕಾರಿಗಳು ಸಹಕರಿಸುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದರು. ಇದು ಒಂದು ದಿನದ ಸಮಸ್ಯೆಯಲ್ಲ ದೀರ್ಘಕಾಲದ ಸಮಸ್ಯೆ ಎಂದು ಹೇಳಿಕೊಂಡಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ರಾಷ್ಟ್ರಧ್ವಜ ಹಾರಿಸೋದನ್ನ ತಡೆಯಲು ಬಹುಮಾನ ಘೋಷಿಸಿದ್ದ ಪನ್ನುನ್ ವಿರುದ್ಧ ಕೇಸ್
ತನಿಖೆ ತೀವ್ರ
ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಘಟನಾ ಸ್ಥಳ ಮತ್ತು ಆರೋಪಿಯ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದಾರೆ. ಸ್ವಾಮೀಜಿ ಮನೆಯಲ್ಲಿದ್ದ ಕಂಪ್ಯೂಟರ್‌ನಿಂದ ಹಾರ್ಡ್ ಡಿಸ್ಕ್ ವಶಕ್ಕೆ ಪಡೆದು ಅದನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೋಟರ್ ಐಡಿ ದುರುಪಯೋಗ ತಡೆಗೆ ಪರಿಹಾರ; ಇ-ಸೈನ್ ವ್ಯವಸ್ಥೆ ಆರಂಭಿಸಿದ ಚುನಾವಣಾ ಆಯೋಗ



