– ಬಿಜೆಪಿಯಲ್ಲಿ ಸೋತವರಿಗಷ್ಟೇ ಆದ್ಯತೆನಾ..?
– ಯೋಗೇಶ್ವರ್ ನಿಮಗೆ ಬ್ಲಾಕ್ ಮೇಲ್ ಮಾಡ್ತಿದ್ದಾನಾ..?
– ಸಿಎಂಗೆ ಹಳ್ಳಿಹಕ್ಕಿ ಬಹಿರಂಗ ಪ್ರಶ್ನೆ
ಮೈಸೂರು: ಯಡಿಯೂರಪ್ಪನವರೇ 17 ಮಂದಿ ಹಾಲಿ ಶಾಸಕರು ನೀಡಿದ ಭಿಕ್ಷೆಯಿಂದ ಇಂದು ಸರ್ಕಾರ ನಿಂತಿದೆ. ಅವರೆಲ್ಲರ ತ್ಯಾಗದಿಂದ ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ ಎಂಬುದನ್ನು ಮರೆಯಬೇಡಿ ಎಂದು ಹಳ್ಳಿ ಹಕ್ಕಿ ಎಂಎಲ್‍ಸಿ ಹೆಚ್. ವಿಶ್ವನಾಥ್ ಅವರು ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆಯೇ ಇಲ್ಲ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ವಿ, ಅವರು ಎಲ್ಲೂ ಕೂಡ ನಮ್ಮ ಹೆಸರನ್ನು ಹೇಳಲಿಲ್ಲ. ಯಡಿಯೂರಪ್ಪನವರಿಗೋಸ್ಕರ ಕಾಂಗ್ರೆಸ್ಸಿನಲ್ಲಿ ಮಂತ್ರಿ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದು ಬಿಎಸ್‍ವೈ ಅವರನ್ನು ಸಿಎಂ ಮಾಡಿದ್ವಿ. ಆದರೆ ಇಂದು ಯಡಿಯೂರಪ್ಪನವರು ಕೂಡ ಕೊಟ್ಟಿದ್ದ ಮಾತು ತಪ್ಪುವುದರ ಮೂಲಕ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು.
ಯಡಿಯೂರಪ್ಪನವರೇ ನಿಮ್ಮ ಮನೆ ದೇವರು ಸಿದ್ದಲಿಂಗೇಶ್ವರನು ನಿಮಗೆ ಒಳ್ಳೆಯದು ಮಾಡುವುದಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನು ದೇವರು ಕೂಡ ಕ್ಷಮಿಸುವುದಿಲ್ಲ. ನೀವು ಎಂತಹ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ? 33 ಮತ್ರಿ ಸ್ಥಾನಗಳಲ್ಲಿ 13 ಮಂದಿ ವೀರಶೈವ, 11 ಮಂದಿ ಒಕ್ಕಲಿಗ, 4 ಮಂದಿ ಕುರುಬರಿಗೆ ಮಂತ್ರಿಗಿರಿ ಕೊಟ್ಟಿದ್ದೀರಾ. ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ನಾಗೇಶ್‍ರನ್ನ ಏಕೆ ತೆಗೆಯಬೇಕು? ಮುನಿರತ್ನರವರ ಬದಲಾಗಿ ಯೋಗೇಶ್ವರ್‍ರವರಿಗೆ ಏಕೆ ಸ್ಥಾನ ನೀಡುತ್ತಿದ್ದೀರಾ ಹೇಳಿ? ಕೋರ್ಟ್ ಆದೇಶಕ್ಕೂ ನನಗೆ ಮಂತ್ರಿ ಸ್ಥಾನ ನೀಡುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುವುದು ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.
ಆ ಸೈನಿಕನ ಮೇಲೆ 420 ಕೇಸ್ ಇದೆ. ಅವನನ್ನು ಸಚಿವನನ್ನಾಗಿ ಮಾಡಲು ದುಂಬಾಲು ಬಿದ್ದಿದ್ದೀರಾ? ಏಕೆ ಎಲ್ಲಾದರೂ ಸಿಕ್ಕಿ ಹಾಕಿಕೊಂಡಿದ್ದೀರಾ ಹೇಳಿ. ಇಲ್ಲಾ ಅವನೇನಾದರೂ ನಿಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನಾ? ಪಕ್ಷ ರಚನೆಗೆ ಅವನೇನಾದರೂ ರಾಜೀನಾಮೆ ಕೊಟ್ಟಿದ್ದಾನಾ ಅಥವಾ ನೀವೆನು ಸೈನಿಕನ ಕೈಗೊಂಬೆ ಆಗಿದ್ದೀರಾ? ನಿಮ್ಮ ಮಾಜಿ ಪಿಎ ಹಾಗೂ ಸ್ನೇನಿಕ ನಿಮ್ಮನ್ನು ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದುಕೊಂಡಿದ್ದಾರಾ ಹೇಳಿ ಎಂದು ಬಿಎಸ್‍ವೈ ಅವರನ್ನು ಹಳ್ಳಿಹಕ್ಕಿ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರೇ ಇಲ್ಲಿಯವರೆಗೂ ನಿಮ್ಮಿಂದ ನಾನು ಏನಾದರೂ ನಿರೀಕ್ಷೆ ಮಾಡಿದ್ದೀನಾ? ಸ್ನೇಹದಲ್ಲಿ ಇದ್ದ ಕಾರಣ ನಿಮಗೆ ಸಹಾಯ ಮಾಡಿದ್ದೆವು. ಆದ್ರೆ ನೀವೆನು ಮಾಡಿದ್ದೀರಾ ಹೇಳಿ. ನೀವು ಅಂದು ಏನು ಮಾತು ಕೊಟ್ಟಿದ್ರಿ ಎಂದು ಹೇಳಿ. ಬನ್ನಿ ಬೇಕಾದರೆ ಯಡಿಯೂರಿಗೆ ಹೋಗೋಣ ಏನಾಗಿತ್ತು ಎಂದು ಅಲ್ಲಿಯೇ ಮಾತನಾಡೋಣ. ನಾವು ಎಂದಿಗೂ ಯಡಿಯೂರಪ್ಪನವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನ ಸಿಎಂ ಮಾಡಿದ ಈ 17 ಜನರು ಕೂಡ ನಿಮ್ಮ ಸಂಪುಟದಲ್ಲಿ ಇರಬೇಕು. ಅದು ಮುಸ್ಲಿಂ ಆಗಿದ್ದರೂ ಇರಬೇಕು, ಎಲ್ಲ ಜಾತಿ ಜನಾಂಗ ಇರಬೇಕು. ನಾಡಿನಲ್ಲಿ ನಾಲಿಗೆ ತಪ್ಪದ ನಾಯಕ ಎಂಬ ಬಿರುದು ಕೊಟ್ಟಿದ್ದು ನಾವೇ ಆದರೆ ಈಗ ಏನಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಯಡಿಯೂರಪ್ಪ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಯೋಗೇಶ್ವರ್‍ರವರು ಮಂತ್ರಿ ಆಗುವುದಕ್ಕೆ ಕಾರಣ ವಿಜಯೇಂದ್ರ. ಅದೇ ರೀತಿ ಯಡಿಯೂರಪ್ಪರ ಪ್ರತಿಷ್ಠೆ ಡೆಮಾಲಿಷ್ ಆಗುವುದಕ್ಕೂ ವಿಜಯೇಂದ್ರರವರೇ ಕಾರಣ. ಇಡೀ ವಿಧಾನಸೌಧದಲ್ಲಿ ಅವರ ಅಣ್ಣ-ತಮ್ಮಂದಿರೇ ಕುಳಿತಿದ್ದಾರೆ. ಯಡಿಯೂರಪ್ಪರವರು ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ. ಯೋಗೇಶ್ವರ್‍ರವರದ್ದು ಒಂದು ರೀತಿ ಬ್ಲಾಕ್ ಮೇಲ್ ತಂತ್ರ. ಅವರ ಬ್ಲಾಕ್ ಮೇಲ್ ಏನಂತ ಯಾವತ್ತಾದರೂ ಒಂದು ದಿನ ಹೊರಗೆ ಬರುತ್ತೆ. ರಾಜ್ಯದಲ್ಲಿ ಸಚಿವರಾಗೋಕೆ ತಮ್ಮ ಹಿಂದೆ ಬ್ಯಾಗ್ ಹಿಡಿದುಕೊಂಡು ಓಡಾಡಿದ್ದೆ ಇಂದು ಮಾನದಂಡವಾಯಿತೇ? ಯೋಗೇಶ್ವರ್‍ಗೆ ಬರಿ ಬಾಂಬೆಯಲ್ಲಿ ಬ್ಯಾಗ್ ಹಿಡಿದ್ದಿದ್ದು ಬಿಟ್ಟರೆ ಮತ್ತೇನೂ ಇಲ್ಲಿಯವರೆಗೂ ಮಾಡಿಲ್ಲ. ಯಡಿಯೂರಪ್ಪನವರೇ ಪ್ರತಿಯೊಂದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ. ಕರ್ನಾಟಕಕ್ಕೆ ಯಡಿಯೂರಪ್ಪನವರೇ ಹೈಕಮಾಂಡ್ ಎಂದು ಎಲ್ಲರಿಗೂ ತಿಳಿದಿದೆ. ಈ ಎಲ್ಲ ಬೆಳವಣಿಗೆಯಿಂದ ನಮಗೆ ನೋವಾಗಿದೆ. ನಾವು ಮನುಷ್ಯರು ನಮಗೂ ಹೃದಯ ಇದೆ, ನಮಗೂ ನೋವಾಗುತ್ತದೆ ಎಂದು ಸಿಎಂ ಬಿಎಸ್‍ವೈ ವಿರುದ್ಧ ಹೆಚ್. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.