ಹಾವೇರಿ: ಹಾನಗಲ್ ತಾಲೂಕಿನ ವರ್ದಿ ಗ್ರಾಮದಲ್ಲಿ ಮನೆಯೊಂದರ ನಿರ್ಮಾಣಕ್ಕಾಗಿ ಬುನಾದಿ ತೆಗೆಯುತ್ತಿದ್ದಾಗ ಬೆಳ್ಳಿ ಹಾಗೂ ಬಂಗಾರದ ನಾಣ್ಯಗಳು ಪತ್ತೆಯಾಗಿವೆ.
ಗ್ರಾಮದ ಲಕ್ಷ್ಮವ್ವ ಕುರುಬರ ಎಂಬವರ ಮನೆ ಬುನಾದಿ ತೆಗೆಯುತ್ತಿದ್ದಾಗ ನಾಣ್ಯಗಳು ಪತ್ತೆಯಾಗಿವೆ. 169 ಬೆಳ್ಳಿ ನಾಣ್ಯಗಳು ಹಾಗೂ 2 ಬಂಗಾರದ ನಾಣ್ಯಗಳು ಸೇರಿದಂತೆ 6 ಬೆಳ್ಳಿಯ ಮುದ್ರೆಗಳು ಪತ್ತೆಯಾಗಿವೆ. ಮಣ್ಣಿನ ಮಡಿಕೆಯಲ್ಲಿ ನಾಣ್ಯಗಳು ಮತ್ತು ಮುದ್ರೆಗಳು ದೊರೆತಿವೆ.
1904, 1908 ಇಸ್ವಿ ಇರುವ ನಾಣ್ಯಗಳು ಇವತ್ತು ಲಭ್ಯವಾಗಿವೆ. ಕಳೆದ ಎರಡು ತಿಂಗಳ ಹಿಂದೆ ಅತಿವೃಷ್ಠಿ ಮತ್ತು ವರದಾ ನದಿ ನೀರಿನಿಂದ ಮನೆ ಬಿದ್ದಿದ್ದರಿಂದ ಹೊಸದಾಗಿ ಮನೆ ನಿರ್ಮಿಸಲು ಬುನಾದಿ ತೆಗೆಯುತ್ತಿದ್ದ ವೇಳೆ ನಾಣ್ಯಗಳು ಹಾಗೂ ಮುದ್ರೆಗಳು ಪತ್ತೆಯಾಗಿವೆ. ಅವುಗಳನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.