ಉಡುಪಿ: ಜಿಲ್ಲೆಯ ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿ, ಹೊರಗಡೆ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಸಹಬ್ ಸಿಂಗ್ ಎಂದು ಗುರುತಿಸಲಾಗಿದೆ.
ಮುಂಬೈನಿಂದ ಕೋಟೇಶ್ವರಕ್ಕೆ ಬಂದಿದ್ದ ಸಹಬ್ ಸಿಂಗ್ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾನೆ. ಈತ ಕುಂದಾಪುರದಲ್ಲಿ ಗ್ಲಾಸ್ ಮತ್ತು ಫ್ಲೈ ವುಡ್ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಜೂನ್ 29 ರಂದು ಕೋಟೇಶ್ವರದ ಬೈಪಾಸ್ ಬಳಿಯ ಬಾಡಿಗೆ ಮನೆಗೆ ಬಂದಿದ್ದು, ಆತನಿಗೆ ಜು.13 ರವರೆಗೆ ಹೋಂ ಕ್ವಾರಂಟೈನ್ ನೀಡಲಾಗಿತ್ತು.
ಕ್ವಾರಂಟೈನ್ ಅವಧಿಯಲ್ಲಿ ಈತ ನಿಯಮ ಉಲ್ಲಂಘಿಸಿ ಉಡುಪಿಯ ಹೋಟೆಲ್‍ಗಳಿಗೆ ತಿರುಗಾಡುತ್ತಿದ್ದ. ಈ ಬಗ್ಗೆ 163 ಬಾರಿ ಹೊರಗೆ ಬಂದ ಬಗ್ಗೆ ಮೊಬೈಲ್ ಜಿಪಿಎಸ್ ಟ್ರ್ಯಾಕರ್‍ನಿಂದ ತಿಳಿದು ಬಂದಿದೆ. ಈ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಜಿ. ಭಟ್ ಅವರು ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 269 (ಜೀವನಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು), 270ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.