162 ಬಾರಿ ಫಾರಿನ್‌ ಟ್ರಿಪ್‌, 300 ಕೋಟಿ ಹಗರಣ – ನಕಲಿ ರಾಯಭಾರ ಕಚೇರಿ ರಹಸ್ಯ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು

Public TV
3 Min Read
Fake Embassy

ಲಕ್ನೋ: ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರಿ ಕಚೇರಿ (Fake Embassy) ಎಂದು ವಂಚನೆ ಮಾಡ್ತಿದ್ದ ಪ್ರಕರಣದ ಕುರಿತು ಸ್ಫೋಟಕ ರಹಸ್ಯಗಳನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ. 8 ವರ್ಷಗಳಿಂದ ನಕಲಿ ಕಚೇರಿ ನಡೆಸುತ್ತಿದ್ದ ಆರೋಪಿ ಹರ್ಷವರ್ಧನ್ ಜೈನ್‌ (Harshvardhan Jain) ಬಗೆಗಿನ ಸತ್ಯಗಳನ್ನು ಕಂಡು ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಹೌದು. ನಕಲಿ ರಾಯಭಾರ ಕಚೇರಿಯಲ್ಲಿ ಸುಮಾರು 300 ಕೋಟಿ ಹಗರಣ ನಡೆದಿದ್ದು, ಬಹು ವಿದೇಶಿ ಬ್ಯಾಂಕ್‌ ಖಾತೆಗಳ (Bank Account) ಲಿಂಕ್‌ ಇರೋದು ಪತ್ತೆಯಾಗಿದೆ. ಆರೋಪಿ ಹರ್ಷವರ್ಧನ್‌ 162 ಬಾರಿ ಫಾರಿನ್‌ ಟ್ರಿಪ್‌ ಹೋಗಿಬಂದಿದ್ದಾನೆ ಅನ್ನೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಬಂಧನ – 45 ಲಕ್ಷ ಹಣ, ಐಷಾರಾಮಿ ಕಾರುಗಳು ವಶಕ್ಕೆ

Fake Embassy 2

300 ಕೋಟಿ ರೂ.ಗಳ ಹಗರಣ
ಯುಪಿ ಎಸ್‌ಟಿಎಫ್‌ ನಡೆಸಿದ ತನಿಖೆಯಲ್ಲಿ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಮತ್ತು ವಂಚಕ ಅಹ್ಸಾನ್‌ ಅಲಿ ಸಯೀದ್‌ಗೆ ಹರ್ಷವರ್ಧನ್‌ನನ್ನ ಪರಿಚಯಿಸಿದ್ದು ಚಂದ್ರಸ್ವಾಮಿ ಅಂತ ತಿಳಿದುಬಂದಿದೆ. ಹೈದರಾಬಾದ್‌ನಲ್ಲಿ ಜನಿಸಿದ್ದ ಸಯೀದ್‌ ಜೈನ್‌ ಈಗ ಟರ್ಕಿ ಪ್ರಜೆಯಾಗಿದ್ದಾರೆ. ಹರ್ಷವರ್ಧನ್‌ ಜೈನ್‌ ಸಯೀದ್‌ ಜೈನ್‌ ಜೊತೆ ಸೇರಿ 25 ನಕಲಿ ಕಂಪನಿಗಳನ್ನು ತೆರೆಯಲು ಕೆಲಸ ಮಾಡಿದ್ದ. ಈ ಹಾದಿಯಲ್ಲಿ 300 ಕೋಟಿ ಹಗರಣ ನಡೆದಿರುವುದು ಗಮನಕ್ಕೆ ಬಂದಿದೆ. ಇದನ್ನೂ ಓದಿ: ನೋಯ್ಡಾದಲ್ಲಿ ಸ್ಕೂಟಿಗೆ BMW ಕಾರು ಡಿಕ್ಕಿ – 5 ವರ್ಷದ ಬಾಲಕಿ ಸಾವು

Fake Embassy 3

ಸ್ವಿಸ್‌ ನಲ್ಲಿ ವಂಚನೆ
ಅಂತಾರಾಷ್ಟ್ರೀಯ ವಂಚಕ ಸಯೀದ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವೆಸ್ಟರ್ನ್ ಅಡ್ವೈಸರಿ ಗ್ರೂಪ್ ಎಂಬ ಕಂಪನಿ ನಡೆಸುತ್ತಿದ್ದ. ಕೆಲ ಸಮಯದ ನಂತರ ಇದನ್ನ ಬ್ರೋಕರೇಜ್‌ ಕಂಪನಿ ಆಗಿ ಬದಲಾಯಿಸಲಾಗಿತ್ತು. ಈ ವೇಳೆ ಸಾಲ ಪಡೆಯುವವರಿಗೆ ಸಹಾಯ, ಮಾರ್ಗದರ್ಶನ ಮಾಡುವ ಭರವಸೆ ನೀಡಿ 25 ದಶಲಕ್ಷ ಪೌಂಡ್‌ (ಸುಮಾರು 300 ಕೋಟಿ ರೂ.) ಸಂಗ್ರಹ ಮಾಡಿದ್ದ. ಬಳಿಕ ಸ್ವಿಸ್‌ ನಿಂದ ಕಂಪನಿಯನ್ನೇ ಎತ್ತಂಗಡಿ ಮಾಡಿದ್ದ ಸಯೀದ್‌. ಈ ಪ್ರಕರಣ ಸಂಬಂಧ ಸಯೀದ್‌ ಜೈನ್‌ನನ್ನ 2022ರಲ್ಲಿ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಜೈನ್‌ ನಕಲಿ ರಾಯಭಾರ ಕಚೇರಿ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬುದನ್ನ ಯುಪಿ ಎಸ್‌ಟಿಎಫ್‌ ಅಧಿಕಾರಿಗಳು ಬಯಲಿಗೆಳೆದಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಹರಿದ್ವಾರ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು

ಏನಿದು ಪ್ರಕರಣ?
ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರ ಕಚೇರಿ (Fake Embassy) ಎಂದು ವಂಚನೆ ಮಾಡ್ತಿದ್ದ ಶಂಕಿತ ಹರ್ಷವರ್ಧನ್ ಜೈನ್‌ನನ್ನ ಯುಪಿ ಎಸ್‌ಟಿಎಫ್ ಬಂಧಿಸಿತ್ತು. ದಾಳಿಯಲ್ಲಿ ಹಲವಾರು ನಕಲಿ ಅಂಚೆ ಚೀಟಿಗಳು, ಪಾಸ್‌ಪೋರ್ಟ್‌ಗಳು, ರಾಜತಾಂತ್ರಿಕ ನೋಂದಣಿ ಫಲಕಗಳು, ವಿದೇಶಿ ಮತ್ತು ದೇಶೀಯ ನಗದು ವಶಪಡಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆ

CRIME

ಆರೋಪಿಯು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನ ಹೊಂದಿರುವ ಹಲವಾರು ಕಾರುಗಳನ್ನು ಹೊಂದಿದ್ದ. ಜೊತೆಗೆ ಪ್ರಧಾನಿ, ರಾಷ್ಟ್ರಪತಿ ಮತ್ತು ಇತರ ಗಣ್ಯರೊಂದಿಗೆ ತಮ್ಮ ಮಾರ್ಫ್ ಮಾಡಿದ ಛಾಯಾಚಿತ್ರಗಳನ್ನ ಬಳಸಿಕೊಂಡು ಜನರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿರೋದು ಬೆಳಕಿಗೆ ಬಂದಿತ್ತು. ದೇಶದಲ್ಲಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ದಲ್ಲಾಳಿ ಮಾಡುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆಯನ್ನು ನಡೆಸುವುದು ಪತ್ತೆಯಾಗಿತ್ತು. ಹರ್ಷವರ್ಧನ್ ಚಂದ್ರಸ್ವಾಮಿ ಮತ್ತು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಅವರೊಂದಿಗೆ ಈ ಹಿಂದೆ ಸಂಪರ್ಕ ಹೊಂದಿದ್ದ ಎಂದು ತನಿಖೆಗಳು ಬಹಿರಂಗಪಡಿಸಿದ್ದವು. 2011 ರಲ್ಲಿ, ಆತನ ಬಳಿ ಅಕ್ರಮ ಸ್ಯಾಟಲೈಟ್ ಫೋನ್ ಕೂಡ ಪತ್ತೆಯಾಗಿತ್ತು, ಇದಕ್ಕಾಗಿ ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಶಪಡಿಸಿಕೊಂಡ ವಸ್ತುಗಳು:
1. ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ನಾಲ್ಕು ಕಾರ್‌ಗಳು
2. 12 ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು
3. ವಿದೇಶಾಂಗ ಸಚಿವಾಲಯದ ಮುದ್ರೆಯೊಂದಿಗೆ ನಕಲಿ ದಾಖಲೆಗಳು
4. ಎರಡು ನಕಲಿ ಪ್ಯಾನ್ ಕಾರ್ಡ್‌ಗಳು
5. ವಿವಿಧ ದೇಶಗಳು ಮತ್ತು ಕಂಪನಿಗಳ ಮೂವತ್ನಾಲ್ಕು ಸೀಲುಗಳು
6. ಎರಡು ನಕಲಿ ಪ್ರೆಸ್ ಕಾರ್ಡ್‌ಗಳು
7. 44.7 ಲಕ್ಷ ರೂ. ನಗದು
8. ವಿವಿಧ ದೇಶಗಳಿಂದ ಬಂದ ವಿದೇಶಿ ಕರೆನ್ಸಿ
9. ವಿವಿಧ ಕಂಪನಿಗಳ ದಾಖಲೆಗಳು
10. ಹೆಚ್ಚುವರಿ ಹದಿನೆಂಟು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ.

Share This Article