– ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಬಂತು ಕೋವಿಡ್ 19
– 164 ಮಂದಿ ಡಿಸ್ಚಾರ್ಜ್, ಒಟ್ಟು ಸೋಂಕಿತರ ಸಂಖ್ಯೆ 5,921ಕ್ಕೆ ಏರಿಕೆ
ಬೆಂಗಳೂರು: ಕಳೆದ ವಾರದಿಂದ ಭಾರೀ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದ ಸೋಂಕು ಇಂದಿನ ಮಟ್ಟಿಗೆ ಕರ್ನಾಟಕಕ್ಕೆ ಸ್ವಲ್ಪ ರಿಲೀಫ್ ಎಂಬಂತೆ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಬಂದಿದೆ. ಆದರೆ ಇಲ್ಲಿಯವರೆಗೆ ಹಸಿರು ಜಿಲ್ಲೆಯಾಗಿದ್ದ ಚಾಮರಾಜನಗರಕ್ಕೆ ಕೊರೊನಾ ಬಂದಿದ್ದು, ಈ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಕೊರೊನಾ ಹರಡಿದಂತಾಗಿದೆ.
ಸೋಮವಾರ 308 ಮಂದಿಗೆ ಸೋಂಕು ಬಂದಿದ್ದರೆ ಇಂದು 161 ಮಂದಿಗೆ ಸೋಂಕು ಬಂದಿದ್ದು ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜ್ವರ, ತಲೆನೋವು, ಉಸಿರಾಟದ ತೊಂದರೆ ಮತ್ತು ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಲಬರುಗಿಯ 17 ವರ್ಷದ ಯುವತಿ ಜೂನ್ 4 ರಂದು ಆಸ್ಪತ್ರೆಗೆ ದಾಖಲಾಗಿದ್ದು ಅಂದೇ ಸಾವನ್ನಪ್ಪಿದ್ದಾಳೆ. ಮಧುಮೇಹ, ರಕ್ತದೊತ್ತಡ, ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಬೆಂಗಳೂರು ನಗರದ 65 ವರ್ಷದ ವ್ಯಕ್ತಿ ಜೂನ್ 3 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜೂನ್ 8ರಂದು ಮೃತಪಟ್ಟಿದ್ದಾರೆ.
Advertisement
Advertisement
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಾಲಿಮೇಡು ಗ್ರಾಮದ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಬಂದಿದೆ. 22 ವರ್ಷದ ಮೆಡಿಕಲ್ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪುಣೆಯಿಂದ ಶ್ರಮಿಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮೂವರ ಕುಟುಂಬ ಬೆಂಗಳೂರಿಗೆ ಬಂದಿತ್ತು. ಇವರು ಕಾರಿನಲ್ಲಿ ಪಾಲಿಮೇಡು ಗ್ರಾಮಕ್ಕೆ ಬಂದಿದ್ದಾರೆ. ವಿದ್ಯಾರ್ಥಿಯ ಕುಟುಂಬ ಪುಣೆಯಲ್ಲಿ ನೆಲೆಸಿದ್ದು ತಾಯಿ ಹಾನೂರು ಗ್ರಾಮದವರು. ಹಾನೂರು ಸುರಕ್ಷಿತ ಎನ್ನುವ ಕಾರಣಕ್ಕೆ ಗ್ರಾಮಕ್ಕೆ ಸೇವಾ ಸಿಂಧು ಅಪ್ಲಿಕೇಶನ್ ನಲ್ಲಿ ನೋಂದಣಿ ಮಾಡಿಕೊಳ್ಳದೇ ಬಂದಿದ್ದರು. ತಾಯಿ ಮತ್ತು ತಮ್ಮನ ವರದಿ ನೆಗೆಟಿವ್ ಬಂದಿದೆ. ವಿದ್ಯಾರ್ಥಿ ಮಾವನ ಗಂಟಲು ದ್ರವ ಪರೀಕ್ಷೆಗೆ ರವಾನಿಸಿದ್ದು, ವಿದ್ಯಾರ್ಥಿ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 7 ಜನರನ್ನು ಚಾಮರಾಜನಗರದಲ್ಲಿ ಕ್ವಾರೈಂಟನ್ ಮಾಡಲಾಗಿದೆ.
Advertisement
Advertisement
ಇಂದಿನ 161 ಸೋಂಕಿತರಿಂದಾಗಿ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಟ್ಟು 5,921ಕ್ಕೆ ಏರಿಕೆಯಾಗಿದೆ. ಇಂದಿನ 161 ರೋಗಿಗಳ ಪೈಕಿ 91 ಮಂದಿ ಅಂತರಾಜ್ಯ ಪ್ರಯಾಣಿಕರಾಗಿದ್ದು, 24 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.
ಯಾದಗಿರಿಯಲ್ಲಿ 61, ಬೆಂಗಳೂರು ನಗರದಲ್ಲಿ 29, ದಕ್ಷಿಣ ಕನ್ನಡದಲ್ಲಿ 23, ಕಲಬುರಗಿ 10 ಪ್ರಕರಣ ಬಂದಿದೆ. ರಾಜ್ಯದಲ್ಲಿ ಅತಿ ಹೆಚ್ಚು 947 ಪ್ರಕರಣ ಬಂದಿರುವ ಉಡುಪಿಯಲ್ಲಿ ಇಂದು ಯಾರಿಗೂ ಪಾಸಿಟಿವ್ ಬಂದಿಲ್ಲ. ಯಾದಗಿರಿಯಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ಪಾಸಿಟಿವ್ ಬಂದಿದ್ದರೆ ದಕ್ಷಿಣ ಕನ್ನಡದಲ್ಲಿ ಪತ್ತೆಯಾದ ಎಲ್ಲ 23 ಮಂದಿ ಪ್ರಯಾಣಿಕರು ಸೌದಿ ಅರೇಬಿಯಾದಿಂದ ಬಂದವರಾಗಿದ್ದಾರೆ.
ಒಟ್ಟು 5,921 ಸೋಂಕಿತರ ಪೈಕಿ ಇಂದು 164 ಮಂದಿ ಬಿಡುಗಡೆಯಾಗಿದ್ದು ಒಟ್ಟು 2,605 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಒಟ್ಟು 3,248 ಸಕ್ರಿಯ ಪ್ರಕರಣಗಳಿದ್ದು ಒಟ್ಟು ರಾಜ್ಯದಲ್ಲಿ 66 ಮಂದಿ ಮೃತಪಟ್ಟಿದ್ದಾರೆ.
ಎಲ್ಲಿ ಎಷ್ಟು ಮಂದಿ ಬಿಡುಗಡೆ?
ಬೀದರ್ 42, ಹಾಸನ 28, ವಿಜಯಪುರ 23, ಚಿಕ್ಕಬಳ್ಳಾಪುರ 17, ಮಂಡ್ಯ 14, ದಕ್ಷಿಣ ಕನ್ನಡ 10, ಉತ್ತರ ಕನ್ನಡ 8, ದಾವಣಗೆರೆ 7, ಬಾಗಲಕೋಟೆ 6, ಶಿವಮೊಗ್ಗ ಮತ್ತು ಮೈಸೂರು 3, ಕೋಲಾರ 2, ಕೊಪ್ಪಳ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ.
ಎಲ್ಲಿ ಎಷ್ಟು ಮಂದಿಗೆ ಸೋಂಕು?
ಯಾದಗಿರಿ 61, ಬೆಂಗಳೂರು ನಗರ 29, ದಕ್ಷಿಣ ಕನ್ನಡ 23, ಕಲಬುರಗಿ 10, ಬೀದರ್ 9, ದಾವಣಗೆರೆ 8, ಕೊಪ್ಪಳ 6, ಶಿವಮೊಗ್ಗ 4 ಮಂದಿಗೆ ಬಂದಿದ್ದರೆ ವಿಜಯಪುರ, ಚಿಕ್ಕಬಳ್ಳಾಪುರ, ಮೈಸೂರು, ಧಾರವಾಡದಲ್ಲಿ ತಲಾ ಇಬ್ಬರಿಗೆ ಸೋಂಕು ಬಂದಿದೆ. ಬಾಗಲಕೋಟೆ, ತುಮಕೂರು, ಚಾಮರಾಜನಗರದಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ.
ಐಸಿಯುನಲ್ಲಿ ಎಷ್ಟು ಮಂದಿ?
ಬೆಂಗಳೂರು ನಗರದಲ್ಲಿ 6, ಕಲಬುರಗಿಯಲ್ಲಿ 4, ಮಂಡ್ಯದಲ್ಲಿ ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಧಾರವಾಡದಲ್ಲಿ ಒಬ್ಬರನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
https://www.facebook.com/publictv/posts/4369546059729779