ಬೆಂಗಳೂರು: 9 ವರ್ಷದ ಬಾಲಕನ ಮೇಲೆ 16 ವರ್ಷದ ಹುಡುಗನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಆರ್.ಟಿ.ನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮುಂಡಿನಗರದಲ್ಲಿ ಹುಡುಗನೊಬ್ಬ ಈ ಕೃತ್ಯ ಎಸಗಿದ್ದು, 20 ದಿನಗಳ ನಂತರ ಕೃತ್ಯ ಬೆಳಕಿಗೆ ಬಂದಿದೆ.
ಚಾಮುಂಡಿನಗರದ ಸಂಬಂಧಿಕರ ಮನೆಗೆ 16 ವರ್ಷದ ಹುಡುಗ ಬಂದಿದ್ದ. ಮನೆಯವರೆಲ್ಲಾ ಆಸ್ಪತ್ರೆಗೆ ತೆರಳಿದ್ದಾಗ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೇ ನಂತರ ಈ ವಿಚಾರವನ್ನು ತಂದೆ, ತಾಯಿಗೆ ಹೇಳಿದರೆ ಅವರನ್ನ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ.
ಘಟನೆಯ ನಂತರ ಬಾಲಕನ ಚಲನವಲನದಲ್ಲಿ ಬದಲಾವಣೆಯಾಗಿದ್ದು, ಮಗನ ವರ್ತನೆಯಿಂದ ಪೋಷಕರು ಆತಂಕಗೊಂಡಿದ್ದಾನೆ. ನಂತರ ಬಾಲಕನನ್ನು ಅಜ್ಜಿಯ ಮನೆಗೆ ಕಳುಹಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿ ಪ್ರಕರಣ ದಾಖಲಾಗಿದ್ದು, ಈಗ ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿಯ ಬಾಲಾರೋಪಿಯನ್ನು ಆರ್.ಟಿ.ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ವೈದ್ಯಕೀಯ ಪರೀಕ್ಷೆ ನಡೆಸಬೇಕು ಮತ್ತು ಆರೋಪಿ ಬಾಲಕನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಂತ್ರಸ್ತ ಬಾಲಕನ ಪೋಷಕರು ಆಗ್ರಹಿಸಿದ್ದಾರೆ.