ಗದಗ: 16 ವರ್ಷದಿಂದ ಮೃಗಾಲಯದಲ್ಲಿ (Zoo) ಘರ್ಜಿಸುತ್ತಿದ್ದ ಹೆಣ್ಣು ಹುಲಿಯೊಂದು (Tiger) ಮೃತಪಟ್ಟ ಘಟನೆ ಗದಗದ (Gadag) ಬಿಂಕದಕಟ್ಟಿ ಮೃಗಾಲಯದಲ್ಲಿ (Binkadakatti Zoo) ನಡೆದಿದೆ.
16 ವರ್ಷ 4 ತಿಂಗಳು ವಯಸ್ಸಿನ ಅನಸೂಯಾ ಎಂಬ ಹೆಸರಿನ ಹೆಣ್ಣು ಹುಲಿ ವಯೋಸಹಜದಿಂದ ಶನಿವಾರ ತಡರಾತ್ರಿ ಝೂನಲ್ಲಿ ಮೃತಪಟ್ಟಿದ್ದಾಳೆ. ರವಿವಾರ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಯಿತು.
ಅನಸೂಯಾಳನ್ನು 4 ತಿಂಗಳು ಇದ್ದಾಗ ಮೈಸೂರು ಮೃಗಾಯಯದಿಂದ (Mysuru) ಗದಗನ ಬಿಂಕದಕಟ್ಟಿ ಮೃಗಾಲಯಕ್ಕೆ ತರಲಾಗಿತ್ತು. ಮೃಗಾಲಯಕ್ಕೆ ತರುವ ಸಂದರ್ಭದಲ್ಲಿ ಬೋನಿನ ಕಬ್ಬಿಣದ ಸರಳುಗಳನ್ನು ಕಚ್ಚಿದ್ದರಿಂದ ಹುಲಿಯ ಹಲ್ಲು, ದವಡೆ ಹಾನಿಯುಂಟಾಗಿತ್ತು. ಚಿಕಿತ್ಸೆ ನೀಡಿದರೂ ಮಾಂಸ ಹಾಗೂ ಗಟ್ಟಿಯಾದ ಪದಾರ್ಥವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಳೆದುಕೊಂಡಿತ್ತು. ಇದರಿಂದ ಅಂದಿನಿಂದಲೂ ಆಹಾರ ಜಗಿಯುವ ಸಮಸ್ಯೆ ಎದುರಿಸುತ್ತಿತ್ತು. ಅಲ್ಲದೇ, ವಯಸ್ಸು ಕೂಡ ಆಗಿದ್ದರಿಂದ ಹೆಣ್ಣು ಹುಲಿ ಅನಸೂಯಾ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ನಾನಿನ್ನೂ ಜೀವಂತವಾಗಿದ್ದೇನೆ – ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ತಂದೆ ಸ್ಪಷ್ಟನೆ
ಗದಗ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ್ ಕೆಂಚಪ್ಪನವರ್, ಗದಗ ಉಪ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಮಹಾಂತೇಶ್ ಪೊಲೀಸಪಾಟೀಲ, ಪಶು ವೈದ್ಯಕೀಯ ಮಹಾವಿದ್ಯಾಲಯ ಹಿರಿಯ ವೈದ್ಯರಾದ ಶಶಿಧರ್ ಬಳ್ಳಾರಿ, ಮೃಗಾಲಯ ವಲಯ ಅರಣ್ಯ ಅಧಿಕಾರಿ ಸ್ನೇಹಾ ಕೊಪ್ಪಳ ಅಸುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಯಿತು.