LatestNational

16 ವರ್ಷದ ಈಕೆ ಈಗ ಏಷ್ಯಾದಲ್ಲೇ ಅತ್ಯಂತ ಕಿರಿಯ ಸ್ನಾತಕೋತ್ತರ ಪದವೀಧರೆ

ಹೈದರಾಬಾದ್: ಸಾಧನೆಗೆ ವಯಸ್ಸಿನ ಹಂಗಿಲ್ಲ ಅಂತಾರೆ. ಈ ಮಾತನ್ನು ನಿಜವಾಗಿಸಿದ್ದಾಳೆ ಹೈದರಾಬಾದ್‍ನ ಈ ಯುವತಿ. ಹೌದು. ನೈನಾ ಜೈಸ್ವಾಲ್(16) ಎಂಬ ಈ ಯುವತಿ ಅತೀ ಕಿರಿಯ ವಯಸ್ಸಿನಲ್ಲಿಯೇ ಏಷ್ಯಾದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾಳೆ.

ಈಕೆ ತನ್ನ 15ನೇ ವಯಸ್ಸಿನಲ್ಲಿ ಏಷ್ಯಾದ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದವಿ ಪಡೆದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಇಷ್ಟು ಮಾತ್ರವಲ್ಲದೇ ನೈನಾ ತನ್ನ 13ನೇ ವಯಸ್ಸಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದು, ದೇಶದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದವಿ ಪಡೆದ ಮೊದಲ ವಿದ್ಯಾರ್ಥಿನಿ ಎಂಬ ಶ್ರೇಯಸ್ಸು ಈಕೆಯದ್ದು.

ಕೇವಲ ಓದಿನಲ್ಲಿ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಈಕೆ ವೃತ್ತಿಪರ ಟೇಬಲ್ ಟೆನ್ನಿಸ್ ಆಟಗಾರ್ತಿಯೂ ಹೌದು. ಟೇಬಲ್ ಟೆನ್ನಿಸ್‍ನಲ್ಲಿ ನೈನಾ ಈಗಾಗಲೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾಳೆ.

ನೈನಾ ಜೇಸ್ವಾಲ್ ಕುಟುಂಬದಲ್ಲಿ ಕಿರಿಯ ವಯಸ್ಸಿನಲ್ಲಿ ಸಾಧನೆ ಮಾಡಿರುವುದು ಇದು ಮೊದಲೇನಲ್ಲ. ಇತ್ತೀಚೆಗಷ್ಟೇ ಈಕೆಯ ತಮ್ಮ ಅಗಸ್ತ್ಯ ಜೈಸ್ವಾಲ್ 11 ವರ್ಷದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಸುದ್ದಿಯಾಗಿದ್ದ. ಈ ಬೆನ್ನಲ್ಲೇ ಇದೀಗ ನೈನಾ ಕೂಡ ತನ್ನ ಸಾಧನೆಯ ಮೂಲಕ ಸುದ್ದಿಯಾಗಿದ್ದಾಳೆ. ಇವರ ತಂದೆ ಜಸ್ವಾಲ್ ಕೂಡಾ 15 ವರ್ಷ ವಯಸ್ಸಿನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Leave a Reply

Your email address will not be published. Required fields are marked *

Back to top button