ಮುಂಬೈ: ಅಪಾರ್ಟ್‌ಮೆಂಟಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪ್ರಾಪ್ತೆಯೊಬ್ಬಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮುಂಬೈ ಉಪನಗರ ಇಲಾಖೆಯ ದಾದರ್ ನಲ್ಲಿ ನಡೆದಿದೆ.
ಶ್ರಾವಣಿ ಚಾವನ್(16) ಮೃತ ಬಾಲಕಿ. ಈಕೆ ಅಪಾರ್ಟ್‌ಮೆಂಟ್ ರೂಮಿನಲ್ಲಿ ಮಲಗಿದ್ದಳು. ಆದರೆ ಆಕೆಯ ಪೋಷಕರು ಬಾಗಿಲು ಲಾಕ್ ಮಾಡಿದ ಪರಿಣಾಮ ಅಪಾರ್ಟ್‌ಮೆಂಟಿನಲ್ಲಿ ಬೆಂಕಿ ಹೊತ್ತಿಕೊಂಡಾಗ ಹೊರಗೆ ಬರಲು ಸಾಧ್ಯವಾಗದೇ ಒಳಗೆ ಉಸಿರುಗಟ್ಟಿ ಬಾಲಕಿ ಮೃತಪಟ್ಟಿದ್ದಾಳೆ.
Advertisement
ಶ್ರಾವಣಿ ತಂದೆ – ತಾಯಿ ಮದುವೆಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಬಾಲಕಿ ರೂಮಿನಲ್ಲಿ ಮಲಗಿದ್ದಳು. ಮಗಳು ನಿದ್ದೆ ಮಾಡಿ ಎದ್ದು ಓದಿಕೊಳ್ಳಲಿ ಎಂದು ಪೋಷಕರು ಮನೆಗೆ ಬೀಗ ಹಾಕಿ ಹೋಗಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Advertisement
Advertisement
ಮಧ್ಯಾಹ್ನ ಸುಮಾರು 1.45 ನಿಮಿಷಕ್ಕೆ ಐದು ಅಂತಸ್ತಿನ ಅಪಾರ್ಟ್‌ಮೆಂಟಿನಲ್ಲಿ ಮೂರನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಶ್ರಾವಣಿ ಮಲಗಿದ್ದ ರೂಮಿಗೂ ಆವರಿಸಿಕೊಂಡಿದೆ. ಇತ್ತ ಪೋಷಕರು ಹೊರಗಿಂದ ಬಾಗಿಲು ಲಾಕ್ ಮಾಡಿದ್ದರಿಂದ ಬೆಂಕಿ ಮಧ್ಯೆ ಸಿಲುಕಿದ ಶ್ರಾವಣಿ ಹೊರಗಡೆ ಬರಲು ಸಾಧ್ಯವಾಗಿಲ್ಲ. ಜೊತೆಗೆ ಹೊಗೆಯಿಂದ ಉಸಿರಾಡಲು ಆಗಲಿಲ್ಲ. ಕೊನೆಗೆ ಶ್ರಾವಣಿ ಪ್ರಜ್ಞೆ ಕಳೆದುಕೊಂಡಿದ್ದಳು.
Advertisement
ಮಾಹಿತಿ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶ್ರಾವಣಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಅಪಾರ್ಟ್‌ಮೆಂಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ತಂಡ ಸತತ 3 ಗಂಟೆಯ ಕಾಲದ ಬಳಿಕ ನಂದಿಸಿದ್ದಾರೆ.
ಈ ಅಗ್ನಿ ಅವಘಡದಿಂದ ವಯರ್ ಗಳು, ಅನೇಕ ಮನೆಗಳ ಬೆಲೆಬಾಳುವ ವಸ್ತುಗಳು ಸಹ ಸುಟ್ಟು ಕರಕಲಾಗಿವೆ. ಅಪಾರ್ಟ್‌ಮೆಂಟಿಗೆ ಅಳವಡಿಸಿದ್ದ ಏರ್ ಕಂಡಿಷನರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅಪಾರ್ಟ್‌ಮೆಂಟಿನಲ್ಲಿ ಬೆಂಕಿ ಹೊತ್ತಿಕೊಂಡ ಸ್ಥಳದಲ್ಲಿ ಖಾಲಿ ಸೀಮೆಎಣ್ಣೆ ಡಬ್ಬ ಪತ್ತೆಯಾಗಿದೆ. ಹೀಗಾಗಿ ಈ ಕುರಿತು ತನಿಖೆ ಮುಂದುವರಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.