ಚಿಕ್ಕಮಗಳೂರು: ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಾಣೆ ಮಾಡುತ್ತಿದ್ದ ಸುಮಾರು 16 ಸಾವಿರ ಕ್ಕೂ ಹೆಚ್ಚು ಸೀರೆಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮುಂದಿನ ತಿಂಗಳ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಬಿಜೆಪಿಯವರು ಭಾರೀ ಪ್ರಮಾಣದ ಸೀರೆಗಳನ್ನ ತರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಈ ಕುರಿತು ಚುನಾವಣೆ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿ ಕ್ರಮಕೈಗೊಳ್ಳಲು ಒತ್ತಾಯಿಸಿದ್ದರು.
Advertisement
ದೂರು ಆಧರಿಸಿ ಚುನಾವಣೆ ಕರ್ತವ್ಯ ಅಧಿಕಾರಿ ಪ್ರಕಾಶ್ ಆಗಮಿಸಿ ಪರಿಶೀಲಿಸಿದ ಬಳಿಕ ತನಿಖಾ ತಂಡದ ತುಷಾರಾ ಮಣಿ, ಆದಾಯ ತೆರಿಗೆ ಸಹಾಯಕ ಅಧಿಕಾರಿ ಪೂರ್ಣಿಮ, ಠಾಣಾಧಿಕಾರಿ ರಕ್ಷಿತ್ ಗೋದಾಮು ಪರಿಶೀಲಿಸಿ ತಪಾಸಣೆ ನಡೆಸಿದ್ದಾರೆ. ಸುಮಾರು 15 ಲಕ್ಷ ರೂ. ಬೆಲೆಯ 16 ಸಾವಿರ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.
Advertisement
ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ನಗರದ ಹೃದಯ ಭಾಗದಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಸುಮಾರು 15 ಲಕ್ಷ ಬೆಲೆ ಬಾಳುವ 16 ಸಾವಿರ ಸೀರೆಗಳನ್ನು ಸರಕು ಸಾಗಣೆ ಸಂಸ್ಥೆ ಲಾರಿಯಲ್ಲಿ ತರಿಸಿದ್ದಾರೆ. ಪ್ರತಿ ಸೀರೆ ಬೆಲೆ 80 ರೂ. ಇದ್ದು, ಈ ಕುರಿತು ಮಾಲೀಕರು ದಾಖಲೆಯನ್ನು ಸಲ್ಲಿಸಿದ್ದಾರೆ. ಆದರೆ ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕ ಕ್ರಮಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಜಪ್ತಿ ಮಾಡಲಾಗಿರುವ ಸೀರೆಗಳನ್ನು ಅಧಿಕಾರಿಗಳ ವಶದಲ್ಲೇ ಇರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.