ಮಂಡ್ಯ: ಎಚ್‍ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬೆಂಬಲಿಗರೊಬ್ಬರು 151 ನಾಟಿಕೋಳಿಗಳನ್ನು ದೇವಿಗೆ ಅರ್ಪಿಸಿ ಹರಕೆ ತೀರಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ತೊರೆಯಮ್ಮ ದೇವಾಲಯದಲ್ಲಿ ಈ ಹರಕೆ ನಡೆದಿದೆ. ಕೆ ಆರ್ ಪೇಟೆ ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಹುಲ್ಲೇಗೌಡ ದೇವರಿಗೆ ಹರಕೆ ಕಟ್ಟಿಕೊಂಡಿದ್ದರು.
ಇವರು ಕೆ.ಆರ್.ಪೇಟೆ ಕ್ಷೇತ್ರದ ಶಾಸಕರಾಗಿ ನಾರಾಯಣಗೌಡ ಆಯ್ಕೆಯಾಗಬೇಕು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು, ಪುಟ್ಟರಾಜು ಸಚಿವರಾಗಬೇಕು ಎಂದು ದೇವರಿಗೆ ಹರಕೆ ಕಟ್ಟಿಕೊಂಡಿದ್ದರು. ಇದೀಗ ಅವರ ಹರಕೆ ಈಡೇರಿದ್ದರಿಂದ 151 ನಾಟಿಕೋಳಿಗಳನ್ನು ದೇವರಿಗೆ ಬಲಿ ನೀಡಿ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಇಂದು ಸ್ವಗ್ರಾಮ ಬೂಕನಕೆರೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಕೂಡ ಹಮ್ಮಿಕೊಂಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದ್ರೆ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಬರುವುದಾಗಿ ಹರಕೆ ಕಟ್ಟಿಕೊಂಡು ಹತ್ತು ಮಂದಿ ಹೋಗಿದ್ದರು.