ಚಿಕ್ಕಮಗಳೂರು: ಕಳೆದ 15 ವರ್ಷಗಳಿಂದ ನೀರೇ ಇಲ್ಲದ ಮಕ್ಕಳ ಆಟದ ಮೈದಾನವಾಗಿದ್ದ ಬೃಹತ್ ಕೆರೆಗೆ ನೀರು ಹರಿದು ಬರುತ್ತಿದ್ದು ಚಿಕ್ಕಮಗಳೂರು ತಾಲೂಕಿನ ಬೆಳವಾಡಿ, ಕಳಸಾಪುರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
Advertisement
ತಾಲೂಕಿಣ ಬೆಳವಾಡಿಯ ಬೃಹತ್ ಕೆರೆಗೆ ನೀರು ಬಂದಿದ್ದು, ರೈತರಿಗೆ ಮರುಳುಗಾಡಲ್ಲಿ ಓಯಾಸಿಸ್ ಸಿಕ್ಕಂತಾಗಿದ್ದು, ಸ್ಥಳೀಯರ ಪಾಲಿಗೆ ಈ ಕೆರೆ ಪ್ರವಾಸಿ ತಾಣವಾಗಿದೆ. ತಾಲೂಕಿನ ಬೆಳವಾಡಿ, ಕಳಸಾಪುರ ಸೇರಿದಂತೆ ಈ ಭಾಗದ ಹತ್ತಾರು ಹಳ್ಳಿಗಳು ಶಾಶ್ವತ ಬರಗಾಲಕ್ಕೆ ತುತ್ತಾದ ಗ್ರಾಮಗಳು. ಈ ಭಾಗದ ಹತ್ತಾರು ಹಳ್ಳಿಯ ಸಾವಿರಾರು ಜನ-ಜಾನುವಾರುಗಳು ಕುಡಿಯೋ ನೀರಿಗೂ ಹಾಹಾಕಾರ ಅನುಭವಿಸಿದ್ದರು.
Advertisement
Advertisement
ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಊರಿಗೆ ಊರೇ ಕೊಚ್ಚಿ ಹೋಗುವಂತಹ ಮಳೆ ಬಂದಿದ್ದರೂ ಈ ಭಾಗದಲ್ಲಿ ವರುಣದೇವನ ಕೃಪೆ ಸಿಕ್ಕಿರಲಿಲ್ಲ. ಮಲೆನಾಡಿಗರು ಮಳೆ ನಿಲ್ಲಲಿ ಎಂದು ಆಕಾಶ ನೋಡುತ್ತಿದ್ದರೆ, ಈ ಭಾಗದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಆದರೆ ಸುಮಾರು 800 ಎಕರೆ ವಿಸ್ತೀರ್ಣದ ಈ ಬೃಹತ್ ಬೆಳವಾಡಿ ಕೆರೆ ಕಳೆದ 15 ವರ್ಷಗಳಿಂದ ಖಾಲಿಯಾಗಿತ್ತು. ಮಳೆಯೂ ಇರಲಿಲ್ಲ. ಯಾವ ಮೂಲದಿಂದಲೂ ಈ ಕೆರೆಗೆ ನೀರು ಬಂದಿರಲಿಲ್ಲ. ಕೆರೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು.
Advertisement
ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಹಳೇಬೀಡು ಕೆರೆ ಕೋಡಿ ಬಿದ್ದಿದ್ದು, ಅಲ್ಲಿಂದ ಕೋಡಿ ಬಿದ್ದ ನೀರು ಬೆಳವಾಡಿ ಕೆರೆಗೆ ಸೇರುತ್ತಿದೆ. ಇದು ರೈತರು ಸಂತಸಕ್ಕೆ ಕಾರಣವಾಗಿದ್ದು, ಕೆರೆಯಲ್ಲಿ ನೀರು ಕಂಡು ರೈತರಿಗೆ ಯುಗಾದಿಯಲ್ಲೂ ಪಟಾಕಿ ಹೊಡೆಯುವಷ್ಟು ಖುಷಿಯಾಗಿದೆ. ಈ ಕೆರೆಗೆ ನೀರಿನ ಸೌಲಭ್ಯ ಕಲ್ಪಿಸುವ ಕರಗಡ ನೀರಾವರಿ ಯೋಜನೆಯಿಂದಲೂ ಈ ಕೆರೆಗೆ ನೀರು ಬಂದಿರಲಿಲ್ಲ. ಈಗಾಗಲೇ ಸುಮಾರು 20 ಕೋಟಿಯಷ್ಟು ಖರ್ಚು ಮಾಡಿದ್ದರು ಕರಗಡ ಯೋಜನೆಯಿಂದ ಬೆಳವಾಡಿ ಕೆರೆಗೆ ನೀರು ಬಂದಿರಲಿಲ್ಲ. ರೈತರು ಕರಗಡ ಯೋಜನೆ ಮುಗಿಸಿ ಎಂದು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಯೋಜನೆಯಿಂದ ನೀರು ಮಾತ್ರ ಬರಲೇ ಇಲ್ಲ.
ಇದೀಗ ಯಾವುದೋ ಒಂದು ಮೂಲೆಯಿಂದ ಕೆರೆಗೆ ನೀರು ಬರ್ತಿರೋದನ್ನು ಕಂಡು ರೈತರ ಮನೆ-ಮನಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕರಗಡ ಯೋಜನೆ ಪೂರ್ಣಗೊಂಡು ಈ ಕೆರೆಗೆ ನೀರು ಬಂದರೆ ಈ ಭಾಗದ ಸಾವಿರಾರು ರೈತರ ನೀರಿನ ಬವಣೆ ತಪ್ಪಲಿದೆ. ಆದರೆ ಕಳೆದ ಎರಡು ದಶಕಗಳಿಂದ ಯೋಜನೆ ಸಾಗುತ್ತಲೇ ಇದೆ.