Connect with us

Bengaluru City

ಪತ್ನಿಯ ಕೊಲೆ ಮಾಡಿ ಪ್ರಿಯತಮೆಗೆ ‘ವ್ಯಾಲೆಂಟೈನ್ ಗಿಫ್ಟ್’ – 15 ವರ್ಷದ ಬಳಿಕ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಕಿರಾತಕ

Published

on

– ಊನವಾಗಿದ್ದ ಕೈಬೆರಳು ಸಾಕ್ಷ್ಯ ಹೇಳಿತ್ತು
– ಗಿಫ್ಟ್ ಪಡೆದಾಕೆ ಈತನಿಗೆ ಕೈಕೊಟ್ಟಳು

ಬೆಂಗಳೂರು/ಅಹಮದಾಬಾದ್: ಪ್ರಿಯತಮೆಯನ್ನು ಸಂಗಾತಿಯಾಗಿಸಲು ಪತ್ನಿಯನ್ನೇ ಕೊಂದಿದ್ದ ಕಿರಾತಕ ಪತಿರಾಯನೊಬ್ಬ 15 ವರ್ಷದ ಬಳಿಕ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದಾನೆ. ಅಹಮದಾಬಾದ್ ಹಾಗೂ ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಿಕ್ಕಿಹಾಕಿಕೊಂಡಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ. ಬೆಂಗಳೂರಿನ ಪ್ರಮುಖ ಐಟಿ ಕಂಪೆನಿಯೊಂದರಲ್ಲಿ ತನ್ನ ಗೆಳೆಯನ ಹೆಸರಿನಲ್ಲಿ ಕೆಲಸ ಗಿಟ್ಟಿಸಿಕೊಂಡು ಸೀನಿಯರ್ ಮ್ಯಾನೇಜರ್ ಆಗಿದ್ದ ತರುಣ್ ಜಿನರಾಜ್ (42) ಎಂಬಾತನನ್ನು ಅಹಮದಾಬಾದ್ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಕೇರಳದ ತ್ರಿಶೂರ್ ಜಿಲ್ಲೆಯ ವಿಯ್ಯೂರ್ ನಿವಾಸಿ ಒ.ಕೆ.ಕೃಷ್ಣನ್ ಹಾಗೂ ಯಾಮಿನಿ ದಂಪತಿಯ ಪುತ್ರಿ ಹಾಗೂ ಬ್ಯಾಂಕ್ ಉದ್ಯೋಗಿಯಾಗಿದ್ದ ಸಜಿನಿ (26) 2003ರ ಫೆಬ್ರವರಿ 14ರಂದು ಅಹಮದಾಬಾದ್‍ನಲ್ಲಿರುವ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದಿಗೆ ಸಜಿನಿ ಹಾಗೂ ತರುಣ್ ಮದುವೆಯಾಗಿ ಕೇವಲ 4 ತಿಂಗಳಷ್ಟೇ ಆಗಿತ್ತು. ತನ್ನ ಸ್ವಂತ ಪತ್ನಿಯನ್ನು ದುಪಟ್ಟಾ ಬಳಸಿ ಕತ್ತು ಹಿಸುಕಿ ಸಾಯಿಸಿ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿ ನಾಟಕವಾಡಿದ್ದ. ಆದರೆ ಐಪಿಎಸ್ ಅಧಿಕಾರಿ ದೀಪನ್ ಭದ್ರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ 15 ವರ್ಷಗಳ ಬಳಿಕ ಸತ್ಯ ಬೆಳಕಿಗೆ ಬಂದಿದೆ.

ಲವ್ವರ್‍ಗೆ ವ್ಯಾಲೆಂಟೈನ್ ಗಿಫ್ಟ್!
ಬಾಸ್ಕೆಟ್ ಬಾಲ್ ತರಬೇತಿದಾರನಾಗಿದ್ದ ತರುಣ್ ಮತ್ತೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಗೆ ವ್ಯಾಲೆಂಟೈನ್ ಗಿಫ್ಟ್ ರೂಪದಲ್ಲಿ ಸಜಿನಿಯನ್ನು ಕೊಂದಿದ್ದ ತರುಣ್, 2003ರ ಫೆಬ್ರವರಿ 14ರಂದು ತನ್ನ ಪ್ರಿಯತಮೆಗೆ ಫೋನ್ ಮಾಡಿ ‘ನಿನಗೊಂದು ಗಿಫ್ಟ್’ ಇದೆ ಎಂದು ಹೇಳಿ ಪತ್ನಿಯನ್ನು ಕೊಲೆ ಮಾಡಿದ್ದನ್ನು ಹೇಳಿದ್ದ. ಆದರೆ ತಕ್ಷಣ ಎಚ್ಚೆತ್ತ ಆಕೆ ಕೊಲೆಗಾರನ ಜೊತೆ ನಾನು ಜೀವನ ಮಾಡಲ್ಲ ಎಂದು ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣವನ್ನು ಮುಚ್ಚಿಹಾಕಲು ಆತ ಮನೆ ದರೋಡೆ ಮಾಡಲು ಬಂದವರು ಕೃತ್ಯವೆಸಗಿದ್ದಾರೆ ಎಂದು ಬಿಂಬಿಸಲು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಸೆದಿದ್ದ.

ಇದಾದ ಬಳಿಕ ಈತ ತನ್ನ ಸೋದರ ಅರುಣ್ ಮನೆಗೆ ಬಂದು ಎಲ್ಲರನ್ನೂ ರಾತ್ರಿ ಊಟಕ್ಕೆ ಕರೆದೊಯ್ದಿದ್ದ. ಆದರೆ ಊಟ ಮುಗಿಸಿ ಮನೆಗೆ ವಾಪಸ್ ಹೋದ ತರುಣ್, ನಾನು ಮನೆಗೆ ಬಂದಾಗ ಸಜಿನಿ ಸಾವನ್ನಪ್ಪಿದ್ದಳು ಎಂದು ಸಂಬಂಧಿಕರಿಗೆ ಫೋನ್ ಮಾಡಿ ಕತೆ ಹೇಳಿದ್ದ.

ತರುಣ್ ತಪ್ಪಿಸಿಕೊಂಡಿದ್ದೇಗೆ..?
ಪತ್ನಿ ಸಾವನ್ನಪ್ಪಿದ ಬಳಿಕ ಖತರ್ನಾಕ್ ನಾಟಕ ಮಾಡಿದ ತರುಣ್ ತನ್ನ ಮನೆಯಲ್ಲಿ ಪ್ರಜ್ಞಾಹೀನನಾದಂತೆ ವರ್ತಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತರುಣ್‍ಗೆ ಪೊಲೀಸರು ಫೋನ್ ಮಾಡಿ ಡಿಸ್ಚಾರ್ಜ್ ಆದ ಬಳಿಕ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಯಾವಾಗ ತಾನು ಪೊಲೀಸರ ಕೈಯಲ್ಲಿ ಸಿಕ್ಕಿಬೀಳುತ್ತೇನೆ ಎಂದು ಖಚಿತವಾಯಿತೋ ಮೀಸೆ ಹಾಗೂ ತಲೆಕೂದಲು ಕಟ್ ಮಾಡಿಸಿ ನೇರವಾಗಿ ಸೂರತ್‍ಗೆ ಆಗಮಿಸುತ್ತಾನೆ. ಅಲ್ಲಿಂದ ತನ್ನ ಗೆಳೆಯ ಹಾಗೂ ಸೋದರನಿಗೆ ಫೋನ್ ಮಾಡಿದ ತರುಣ್ ನಾನು ದೂರದೂರಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಬಳಿಕ ನೇರವಾಗಿ ಬೆಂಗಳೂರಿಗೆ ಆಗಮಿಸುತ್ತಾನೆ. ಬೆಂಗಳೂರಿನಲ್ಲಿದ್ದ ಆತ ಇಲ್ಲಿಂದಲೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ದೆಹಲಿಯಲ್ಲಿ ಉದ್ಯೋಗ ಪಡೆಯುತ್ತಾನೆ. ಐದು ವರ್ಷದ ಬಳಿಕ ದೆಹಲಿಯ ಅದೇ ಕಂಪೆನಿಯ ಪುಣೆ ಶಾಖೆಗೆ ವರ್ಗವಾಗುತ್ತಾನೆ. ಅಲ್ಲಿ 2009ರಲ್ಲಿ ಸಹೋದ್ಯೋಗಿ ನಿಶಾ ಜೊತೆ ಲವ್ ಆಗುತ್ತೆ. ಅದೇ ವರ್ಷ ಇಬ್ಬರೂ ಮದುವೆಯಾಗುತ್ತಾರೆ.

ಅಲ್ಲಿಂದ ಮುಂದೆ ಆತ ಬೆಂಗಳೂರಿನ ಐಟಿ ಕಂಪೆನಿಗೆ ಆಗಮಿಸುತ್ತಾನೆ. ಈ ಕಂಪೆನಿಯಲ್ಲಿ ಸೀನಿಯರ್ ಮ್ಯಾನೇಜರ್ ಹುದ್ದೆಯಲ್ಲಿದ್ದ ಈತ ಪ್ರತಿವರ್ಷ 22 ಲಕ್ಷ ವೇತನ ಪಡೆಯುತ್ತಿದ್ದ. ಯಲಹಂಕದಲ್ಲಿ ಫ್ಲ್ಯಾಟೊಂದರಲ್ಲಿ ವಾಸವಾಗಿದ್ದ ತರುಣ್-ನಿಶಾ ದಂಪತಿಗೆ 7 ಹಾಗೂ 6 ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ.

ತರುಣ್ ಪ್ರವೀಣ್ ಆದ ಕತೆ!
ಕಾಲೇಜಿನಲ್ಲಿ ಜ್ಯೂನಿಯರ್ ಆಗಿದ್ದ ಪ್ರವೀಣ್ ಭಾಟ್ಲೆ ತರುಣ್ ಗೆಳೆಯನಾಗಿದ್ದ. ನಿನಗೆ ಕೆಲಸ ಕೊಡಿಸ್ತೀನಿ ಎಂದು ಪ್ರವೀಣನ ಎಲ್ಲಾ ಅಸಲಿ ಮಾರ್ಕ್ಸ್ ಕಾರ್ಡ್ ಮುಂತಾದ ದಾಖಲೆಗಳನ್ನು ತೆಗೆದುಕೊಂಡಿದ್ದ ತರುಣ್ ಕೊನೆಗೆ ತಾನೇ ಪ್ರವೀಣ್ ಭಾಟ್ಲೆ ಆಗಿ ಕೆಲಸಕ್ಕೆ ಸೇರಿದ್ದ. ಈತನ ಈ ವಂಚನೆ ಯಾವ ಮಟ್ಟದಲ್ಲಿತ್ತು ಎಂದರೆ ತನ್ನ ಪತ್ನಿ ನಿಶಾಗೂ ಈತ ನಿಜ ಹೇಳಿರಲಿಲ್ಲ. ಕಾರು ಅಪಘಾತದಲ್ಲಿ ನಾನು ಅಪ್ಪ-ಅಮ್ಮ, ಸೋದರನನ್ನು ಕಳೆದುಕೊಂಡೆ ಎಂದು ಸುಳ್ಳು ಹೇಳಿ ಆಕೆಯನ್ನು ಮದುವೆಯಾಗಿದ್ದ. ಇದಾದ ಕೆಲ ಸಮಯದ ಬಳಿಕ ಧ್ಯಾನ ಕೇಂದ್ರವೊಂದಕ್ಕೆ ಅಪ್ಪ-ಅಮ್ಮನನ್ನು ಕರೆಸಿ ಪತ್ನಿ ಜೊತೆ ಅವರನ್ನು ಭೇಟಿಯಾಗಲು ಹೋಗಿದ್ದ. ಆದರೆ ಮಗನನ್ನು ಹಲವು ವರ್ಷಗಳ ಬಳಿಕ ನೋಡಿದ ಅಪ್ಪನಿಗೆ ಹೃದಯಾಘಾತವಾಗಿ ಅಲ್ಲೇ ಸಾವನ್ನಪ್ಪುತ್ತಾರೆ. ಜನ ಸೇರುತ್ತಿರುವುದು ಖಚಿತವಾಗುತ್ತಿದ್ದಂತೆಯೇ ಅಪ್ಪನ ಮೃತದೇಹವನ್ನು ಅಮ್ಮನ ಬಳಿ ಬಿಟ್ಟು ಪತ್ನಿ ಜೊತೆ ಅಲ್ಲಿಂದ ಎಸ್ಕೇಪ್ ಆಗಿದ್ದ ತರುಣ್ ಅಲಿಯಾಸ್ ಪ್ರವೀಣ್. ಆದರೆ ಈ ಎಲ್ಲದರ ನಡುವೆ ಮಗನನ್ನು ಸಂಪರ್ಕಿಸಲೆಂದೇ ತರುಣ್ ಅಮ್ಮ ಒಂದು ಫೋನ್ ಇಟ್ಟುಕೊಂಡಿದ್ದರು. ಆ ಒಂದು ಫೋನ್ ಮುಂದೆ ತರುಣ್‍ಗೆ ಉರುಳಾಗಿದ್ದು ಮಾತ್ರ ದುರಂತ.

9 ವರ್ಷ ಬಳಿಕ ಕೇಸ್ ರಿಓಪನ್!
ಪುತ್ರಿ ಸಾವನ್ನಪಿದ ದುಃಖದಲ್ಲಿದ್ದ ಸಜಿನಿ ತಂದೆ ಕೃಷ್ಣ ಹಾಗೂ ಅವರ ಸಹೋದರಿಯ ಪತಿ ಪಿ.ಕೆ.ಶಶಿಧರ್ ನಿರಂತರವಾಗಿ ಈ ಪ್ರಕರಣದ ಹಿಂದೆ ಬಿದ್ದಿದ್ದರು. ಹೀಗಾಗಿ ಮುಚ್ಚಿಹೋಗಿದ್ದ ಸಜಿನಿ ಕೊಲೆ ಪ್ರಕರಣ 2012ರಲ್ಲಿ ರಿಓಪನ್ ಆಯ್ತು. ಅಲ್ಲದೇ ಮಲಯಾಳಿಯೇ ಆಗಿದ್ದ ಐಪಿಎಸ್ ಅಧಿಕಾರಿ ದೀಪನ್ ಪ್ರಭುವಿಗೆ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪ್ರತಿ ವರ್ಷ ಫೆಬ್ರವರಿ 14ರ ವ್ಯಾಲೆಂಟೈನ್ ಡೇಯಂದು ಸಜಿನಿ ಫೋಟೋ ಹಾಕಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಪೋಷಕರು ಆಕೆಯನ್ನು ಸ್ಮರಿಸುತ್ತಿದ್ದರು.

ಸುಳ್ಳಾಗಲಿಲ್ಲ ಲೆಕ್ಕಾಚಾರ!
ಕೇಸ್ ವಿಚಾರಣೆ ಪುನಾರಂಭಿಸಿದ ಪೊಲೀಸರು ತರುಣ್ ತಾಯಿ ಅನ್ನಮ್ಮ ಅವರಿಗೆ ಬರುತ್ತಿದ್ದ ಫೋನ್ ಕರೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಅನ್ನಮ್ಮ ಫೋನ್ ಗೆ ಬರುತ್ತಿದ್ದ ಎಲ್ಲಾ ಕರೆಗಳನ್ನು 6 ವರ್ಷಗಳ ಕಾಲ ಪೊಲೀಸರು ಪರಿಶೀಲನೆ ಮಾಡುತ್ತಲೇ ಇದ್ದರು. ಅಹಮದಾಬಾದ್ ನ ಬೋಪಾಲದಲ್ಲಿದ್ದ ಅನ್ನಮ್ಮ ಹಾಗೂ ಸೋದರ ಅರುಣ್ ನಿವಾಸದ ಮೇಲೆ ಕಣ್ಣಿಟ್ಟಿದ್ದರು. ತನಿಖೆಯ ತೀವ್ರತೆ ಎಷ್ಟಿತ್ತೆಂದರೆ ಇವರಿದ್ದ ಇದೇ ಫ್ಲ್ಯಾಟ್ ನಲ್ಲಿ ಪೊಲೀಸರು ಗಸ್ತಿನಲ್ಲಿ ಮೂರು ವರ್ಷ ವಾಸವಾಗಿದ್ದರು. ಈ ವೇಳೆ ಪೊಲೀಸರಿಗೆ ತರುಣ್ ದಕ್ಷಿಣ ಭಾರತದಲ್ಲಿದ್ದಾನೆ ಎಂಬ ವಿಚಾರ ಖಚಿತವಾಗಿತ್ತು. ಹೀಗಾಗಿ ಪೊಲೀಸರು ಅನ್ನಮ್ಮ ಅವರ ಪ್ರಯಾಣದ ಹಿಂದೆ ಬಿದ್ದಿದ್ದರು.

ಬೆಂಗಳೂರಿನಲ್ಲಿ ಇವರು ಹೋಗುತ್ತಿದ್ದ ಮನೆಯಲ್ಲಿದ್ದದ್ದು ನಿಶಾ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಪತಿಯ ಹೆಸರು ಪ್ರವೀಣ್ ಎಂದು ಗೊತ್ತಾಗಿತ್ತು. ಆದರೆ ಇದೇ ಪ್ರವೀಣ್ ತರುಣ್ ಎನ್ನುವುದು ಮಾತ್ರ ಅಷ್ಟು ಸುಲಭದಲ್ಲಿ ಗೊತ್ತಾಗಲಿಲ್ಲ. ನಿಶಾ ನಮ್ಮ ಸಂಬಂಧಿಯ ಮಗಳು ಎಂದಷ್ಟೇ ಅನ್ನಮ್ಮ ಪೊಲೀಸರ ಬಳಿ ಹೇಳಿದ್ದರು. ಹೀಗಿರುವಾಗಲೇ ಒಂದು ದಿನ ಅನ್ನಮ್ಮ ಮೊಬೈಲಿಗೆ ಬೆಂಗಳೂರಿನ ಐಟಿ ಕಂಪೆನಿಯೊಂದರಿಂದ ಕಾಲ್ ಬಂದಿತ್ತು. ಕರೆ ಮಾಡಿದ್ದು ಪ್ರವೀಣ್ ಎಂಬುದನ್ನೂ ಪೊಲೀಸರು ಪತ್ತೆ ಹಚ್ಚಿದ್ದರು. ಈ ಮೂಲಕ ಪೊಲೀಸರಿಗೆ ಪ್ರವೀಣ್ ತರುಣ್ ಎಂಬ ಸಂಶಯ ಬಲವಾಯಿತು. ತರುಣ್ ಫೋಟೋವನ್ನು ಆತನ ಸಹೋದ್ಯೋಗಿಗಳು ದೃಢೀಕರಿಸಿದ್ದರು. ಆದರೆ ನಿಜವಾದ ಪ್ರವೀಣ್ ಭಾಟ್ಲೆ ಉತ್ತರ ಭಾರತದಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾನೆಂದೂ ಗೊತ್ತಾಯಿತು.

ಉಂಗುರ ಬೆರಳು ಸತ್ಯ ಬಿಚ್ಚಿಟ್ಟಿತು!
ತರುಣ್ ಬಲೆಗೆ ಬಿದ್ದ ವಿಚಾರವನ್ನು ಪೊಲೀಸ್ ಅಧಿಕಾರಿ ದೀಪನ್ ಪ್ರಭು ಹೇಳಿದ್ದು ಹೀಗೆ: ‘ಪಿ.ಟಿ. ಮೇಷ್ಟ್ರಾಗಿದ್ದ ವೇಳೆ ತರುಣ್ ಬಲಗೈ ಉಂಗುರ ಬೆರಳಿಗೆ ಗಾಯವಾಗಿತ್ತು. ಇದರಿಂದ ಆತನ ಬೆರಳು ಊನವಾಗಿತ್ತು. ಇದೇ ಬೆರಳು ತರುಣ್ ಬಗೆಗಿನ ಸತ್ಯ ಬಿಚ್ಚಿಡಬೇಕಿತ್ತು. ಇನ್ಸ್‍ಪೆಕ್ಟರ್ ಕಿರಣ್ ಚೌಧರಿ ಮಫ್ತಿಯಲ್ಲಿ ತರುಣ್ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಐಟಿ ಕಂಪೆನಿಯ ಕಚೇರಿಗೆ ತೆರಳಿ ಅವರನ್ನು ಹೊರಗೆ ಕರೆಸಿದರು. ತರುಣ್ ಬರ್ತಿದ್ದಂಗೆ ಹ್ಯಾಂಡ್ ಶೇಕ್ ಕೊಟ್ರು. ಈ ವೇಳೆ ಆತನ ಕೈಬೆರಳು ಊನವಾಗಿರೋದು ಗೊತ್ತಾಯಿತು. ತಕ್ಷಣ ತರುಣ್ ಅಲ್ವಾ ಎಂದು ಚೌಧರಿ ಪ್ರಶ್ನಿಸಿದರು. ಒಂದು ಕ್ಷಣ ಬೆಚ್ಚಿಬಿದ್ದಂತಾದ ತರುಣ್ ಸಾವರಿಸಿಕೊಂಡು ಹೌದು ಎಂದು ಉತ್ತರಿಸಿದ್ದ. ಹಾಗಾದ್ರೆ ಬನ್ನಿ ಹೋಗೋಣ ಎಂದು ಹೇಳಿದ್ರು ಚೌಧರಿ, ಏನೂ ಮಾತಾಡದೇ ತರುಣ್ ಜೊತೆಗೆ ಬಂದ. ಹೀಗೆ 15 ವರ್ಷಗಳ ಬಳಿಕ ಆತ ಅರೆಸ್ಟ್ ಆಗಿದ್ದ ಎಂದು ಮಾತು ಮುಗಿಸಿದರು ದೀಪನ್ ಪ್ರಭು.

ಇಷ್ಟೆಲ್ಲಾ ಆದ ಬಳಿಕ ಎಲ್ಲಾ ಸತ್ಯವನ್ನು ಬಾಯ್ಬಿಟ್ಟ ತರುಣ್ ಪೊಲೀಸರಿಗೆ ಕೇಳಿದ್ದು ಒಂದೇ ಪ್ರಶ್ನೆ. ‘ಎಲ್ಲಾ ಸರಿ ಸಾರ್, ನಾನಿಲ್ಲಿದ್ದೇನೆ ಎಂದು ನಿಮಗೆ ಹೇಳಿಕೊಟ್ಟಿದ್ದು ಯಾರು…?’

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *