ಭೋಪಾಲ್: 15 ವರ್ಷದ ಬಾಲಕಿಯ ಮೇಲೆ ಟ್ರಕ್ ಚಾಲಕನೊಬ್ಬ ಅತ್ಯಾಚಾರ ಎಸಗಿರುವುದು ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಸಿಯಾರ್ಮೌ ಅರಣ್ಯದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕ ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಟ್ರಕ್ ಚಾಲಕನನ್ನು ಸಂಜು ಆದಿವಾಸಿ (21) ಎಂದು ಗುರುತಿಸಲಾಗಿದೆ. ಅಲ್ಲದೇ ಆತನ ಸಹಚರ ಶಿವನಾರಾಯಣ ಅಡ್ವಾಸಿಯನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಅಕ್ಷಯ್ ಅಹಿರ್ವಾರ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ತನ್ನ ಸ್ನೇಹಿತನೊಂದಿಗೆ ವನದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದಳು. ಈ ವೇಳೆ ಅರಣ್ಯ ಪ್ರದೇಶದ ಬಳಿ ಬೈಕ್ ನಿಲ್ಲಿಸಿ ಕಾಡಿನೊಳಗೆ ತೆರಳಿದ್ದಾರೆ. ಇದೇ ವೇಳೆ ಆ ಜಾಗದಲ್ಲಿ ಟ್ರಕ್ ಕೆಟ್ಟು ನಿಂತಿದ್ದು, ಬಾಲಕಿಯನ್ನು ಗಮನಿಸಿದ ಟ್ರಕ್ ಚಾಲಕ ಹಾಗೂ ಆತನ ಸ್ನೇಹಿತರು ಅಪ್ರಾಪ್ತೆಯ ಸ್ನೇಹಿತನ ಬೈಕ್ ಕೀ ಕಸಿದುಕೊಂಡು ಆತನಿಗೆ ಥಳಿಸಿದ್ದಾರೆ. ಬಳಿಕ ಬಾಲಕಿಯ ಮೇಲೆ ಟ್ರಕ್ ಚಾಲಕ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 64 (ಅತ್ಯಾಚಾರ), 70-1 (ಗ್ಯಾಂಗ್ ರೇಪ್) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.