ಮುಂಬೈ: 4ನೇ ಮಹಡಿಯಿಂದ ಬಿದ್ದ 1 ವರ್ಷ 3 ತಿಂಗಳ ಪುಟ್ಟ ಕಂದಮ್ಮವೊಂದು ಪವಾಡ ಸದೃಶವಾಗಿ ಬದುಕುಳಿದ ಘಟನೆ ಮುಂಬೈನಲ್ಲಿ ನಡೆದಿದೆ.
ಅಥರ್ವ ಬದುಕಿ ಬಂದ ಬಾಲಕ. ಈತ ಮನೆಯ 4ನೇ ಮಹಡಿಯ ಬಾಲ್ಕನಿಯಿಂದ ಗುರುವಾರ ಬೆಳಗ್ಗೆ ಬಿದ್ದಿದ್ದಾನೆ. ಘಟನೆಯಿಂದ ಬಾಲಕನಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗದೇ ಬದುಕಿದ್ದು, ಆದ್ರೆ ಮುನ್ನೆಚ್ಚರಿಕಾ ಕ್ರಮವಾಗಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ವಿವರ:
ಬಾಲಕನ ತಂದೆ ಬರ್ಕದೆಸ್ ಅವರು ಡಿಯೋನರ್ ಜೆ ಗೋಪಿ ಕೃಷ್ಣ ಸಿಎಚ್‍ಎಸ್ ನ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದರು. ನಿನ್ನೆ ಬೆಳಗ್ಗೆ 8.45ರ ಸುಮಾರಿಗೆ ಅಥರ್ವ ತಂದೆ ಅಜಿತ್ ಅವರು ಕಚೇರಿಗೆ ತೆರಳಲೆಂದು ರೆಡಿಯಾಗುತ್ತಿದ್ದರು. ಇನ್ನೊಂದೆಡೆ ಮನೆಯ ಮೂಲೆಯಲ್ಲಿರೋ ಲಿವಿಂಗ್ ರೂಂ ಪಕ್ಕ ಇರೋ ಬಾಲ್ಕನಿಯಲ್ಲಿ ಅಥರ್ವ ಅಜ್ಜಿ ಒಗೆದ ಬಟ್ಟೆಗಳೆನ್ನೆಲ್ಲಾ ಒಣಗಲು ಹಾಕೋದ್ರಲ್ಲಿ ಬ್ಯುಸಿಯಾಗಿದ್ದರು. ಅಜ್ಜಿ ಹಿಂದೆಯೇ ತೆವಳುತ್ತಾ ಹೋಗಿದ್ದ ಅಥರ್ವ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾನೆ.
ಇತ್ತ ಆಫೀಸಿಗೆ ರೆಡಿಯಾಗಿದ್ದ ಅಜಿತ್ ಲಿವಿಂಗ್ ರೂಂಗೆ ಬರುತ್ತಿರುವಾಗ ಅಥರ್ವ ತೆವಳುತ್ತಾ ಬಾಲ್ಕನಿಯಲ್ಲಿ ನೋಡ ನೋಡುತ್ತಿದ್ದಂತೆಯೇ ಕೆಳಗೆ ಬಿದ್ದಿದ್ದಾನೆ. ನಾನು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ. ಈ ವೇಳೆ ಅಜಿತ್ ಜೋರಾಗಿ ಕಿರುಚಿಕೊಂಡಿದ್ದು ಕೇಳಿಸಿತ್ತು. ಕೂಡಲೇ ನಾವೆಲ್ಲರೂ ಲಿವಿಂಗ್ ರೂಮ್ ನತ್ತ ಓಡಿದೆವು. ಆಗ ಆತ ಬಾಲ್ಕನಿಯಿಂದ ಕೆಳಗೆ ಬಿದ್ದಿರುವುದು ತಿಳಿಯಿತು ಅಂತ ಅಥರ್ವ ಆಂಟಿ ಅಂಜಲಿ ತಿಳಿಸಿದ್ದಾರೆ.
ಘಟನೆಯನ್ನರಿತ ತಕ್ಷಣವೇ ನಾವೆಲ್ಲರೂ ಕೆಳಗಿನ ಮಹಡಿಗೆ ಬಂದೆವು. ಆಗ ಅಲ್ಲಿ ನಾವು ಅಥರ್ವ ಕಂಡು ಅಚ್ಚರಿಗೊಳಗಾದೆವು. ಆತ ಅಲ್ಲಿ ಜೋರಾಗಿ ಅಳುತ್ತಾ, ನಿಲ್ಲಲು ಪ್ರಯತ್ನಿಸುತ್ತಿದ್ದನು. ಹೀಗಾಗಿ ಬಿದ್ದಿರುವುದನ್ನು ಕಂಡು ಭಯದಿಂದ ನಾವು ಆತನಿಗೆ ಏನೂ ಆಗಿಲ್ಲ. ಹುಷಾರಾಗಿದ್ದಾನೆ ಅಂತ ನಿಟ್ಟಿಸಿರುಬಿಟ್ಟೆವು ಎಂದು ಅವರು ವಿವರಿಸಿದ್ರು.
ಘಟನೆಯ ಬಳಿಕ ಅನುಮಾನಗೊಂಡ ಅಜಿತ್ ಮತ್ತು ಮಂಗಳ್ ಮಗ ಅಥರ್ವನನ್ನು ಆಸ್ಪತ್ರೆಗೆ ಕರೆದೊಯ್ದು ಆತನ ದೇಹವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಆಗ ಬಾಲಕನ ಹಿಂಬಂದಿಗೆ ಸಣ್ಣಮಟ್ಟಿನ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದ್ರೂ ಆತಂಕಗೊಂಡಿದ್ದ ಅಥರ್ವ ಹೆತ್ತವರು ನುರಿತ ತಜ್ಞರ ಬಳಿ ಪರೀಕ್ಷೆ ನಡೆಸಲು ಚಿಂತಿಸಿದ್ದಾರೆ. ಅಲ್ಲದೇ ಅಲ್ಲಿಂದ ನೇರವಾಗಿ ಆಟೋ ಹಿಡಿದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಲ್ಲಿ ವೈದ್ಯರು ನಮ್ಮಲ್ಲಿ ಮಗುವನ್ನು ಅಡ್ಮಿಟ್ ಮಾಡಿಕೊಳ್ಳಲು ಯಾವುದೇ ಸೌಲಭ್ಯಗಳಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಬಳಿಕ ನಾವು ಮುಲುಂದ್ ನಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಥರ್ವ ತಾಯಿ ಮಂಗಳ್ ಹೇಳಿದ್ದಾರೆ.
ಸದ್ಯ ಬಾಲಕ ಐಸಿಯುನಲ್ಲಿ ದಾಖಲಾಗಿದ್ದಾನೆ. ಬಾಲಕನ ದೇಹವನ್ನು ಸ್ಕ್ಯಾನ್ ಮಾಡಿದಾಗ ಆತನ ಶರೀರದೊಳಗೆ ಯಾವುದೇ ರೀತಿಯ ಗಾಯಗಳಾಗಿರುವುದು ಕಂಡು ಬಂದಿಲ್ಲ ಎಂಬುದಾಗಿ ವರದಿಯಾಗಿದೆ.
ಬಾಲಕ ಮೊದಲು ಬಾಲ್ಕನಿ ಹೊಂದಿಕೊಂಡಿದ್ದ ಮರದ ರೆಂಬೆಗಳಲ್ಲಿ ಸಿಲುಕಿಕೊಂಡು ನಂತರ ಅಲ್ಲಿಂದ ನೆಲಕ್ಕೆ ಬಿದ್ದಿದ್ದಾನೆ. ಹೀಗಾಗಿ ಬಿದ್ದ ರಭಸವನ್ನು ರೆಂಬೆ ಕಡಿಮೆ ಮಾಡಿದೆ. ಒಂದು ವೇಳೆ ಆತ ಬಾಲ್ಕನಿಯಿಂದ ನೇರವಾಗಿ ಕೆಳಗೆ ಬೀಳುತ್ತಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಒಟ್ಟಿನಲ್ಲಿ ಬಾಲ್ಕನಿಯಿಂದ ಬೀಳುತ್ತಿದ್ದಂತೆಯೇ ಮಗು ಮರದ ಕೊಂಬೆಯ ಮೇಲೆ ಬಿದ್ದು ನಂತರ ಅಲ್ಲಿ ನಿಯಂತ್ರಣ ಸಿಗದೇ ಕೆಳಕ್ಕೆ ಬಿದ್ದಿದ್ದಾನೆ. ಯಾಕಂದ್ರೆ ಬಿದ್ದ ಮಗುವಿನ ಕೈಯಲ್ಲಿ ಎಲೆಗಳಿದ್ದವು ಅಂತ ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv