ಭುವನೇಶ್ವರ: ಒಡಿಶಾದ (Odisha) ಐದು ಜಿಲ್ಲೆಗಳಲ್ಲಿ ಭಾನುವಾರ ಸಿಡಿಲು ಬಡಿದು (Lightning Strikes) 6 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ 2 ದಿನದಲ್ಲಿ ಸಿಡಿಲಿನಿಂದ ಬಲಿಯಾದವರ ಸಂಖ್ಯೆ 15ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾಜ್ಯದ ವಿವಿಧ ಭಾಗಗಳಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕೇಂದ್ರಪಾರ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರೆ, ಬಾಲಸೋರ್, ಭದ್ರಕ್, ಜಾಜ್‍ಪುರ ಮತ್ತು ಸುವರ್ಣಪುರದಲ್ಲಿ ಸಿಡಿಲು ಬಡಿದು ತಲಾ ಒಬ್ಬರು ಬಲಿಯಾಗಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ.
ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಸಿಡಿಲು ಬಡಿದು ಹಲವರು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಸಿಡಿಲಿನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಅಲ್ಲದೇ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ಒಡಿಶಾದಲ್ಲಿ ಸಿಡಿಲು ಸಾವಿನ ಸಂಖ್ಯೆ ಹೆಚ್ಚು. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 300 ಜನ ಸಿಡಿಲು ಬಡಿದು ಸಾವನ್ನಪ್ಪುತ್ತಿದ್ದಾರೆ. ಇದನ್ನು ತಪ್ಪಿಸಲು `ಮಿಂಚಿನ ಬಂಧನಕಾರರು’ ಎಂದು ಕರೆಯಲ್ಪಡುವ 20 ಲಕ್ಷ ತಾಳೆ ಮರಗಳನ್ನು ರಾಜ್ಯಾದ್ಯಂತ ಶೀಘ್ರದಲ್ಲೇ ನೆಡಲು ಸರ್ಕಾರ ಮುಂದಾಗಿದೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ತಿಳಿಸಿದ್ದಾರೆ.
ಒಡಿಶಾದಲ್ಲಿ ಮಿಂಚಿನ ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.