ರಾಯಚೂರು: ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎನ್ನುವ ಹಾಗೇ ಕೇವಲ ಸಾವಿರಾರು ರೂಪಾಯಿ ಆಸೆಗೆ ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಂಡು ಜಿಲ್ಲೆಯ ಎಲೆಬಿಚ್ಚಾಲಿ ಗ್ರಾಮ ಪಂಚಾಯ್ತಿಯ 15 ಸದಸ್ಯರು ತಮ್ಮ ಸದಸ್ಯತ್ವವನ್ನೇ ಕಳೆದುಕೊಂಡಿದ್ದಾರೆ.
ಎಲೆ ಬಿಚ್ಚಾಲಿ ಗ್ರಾಮ ಪಂಚಾಯ್ತಿಯಲ್ಲಿ 2016-2017ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಅನುದಾನವನ್ನು ಅಧ್ಯಕ್ಷೆಯ ಪತಿ, ಮಾವ ವೈಯಕ್ತಿಕ ಹೆಸರಿನಲ್ಲಿ ಚೆಕ್ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿಗಳು ಗ್ರಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿ ಒಟ್ಟು 15 ಜನ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
Advertisement
Advertisement
ಹಣ ದುರುಪಯೋಗದ ಬಗ್ಗೆ ತನಿಖೆ ನಡೆಸಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 2018 ಡಿಸೆಂಬರ್ 14ರಂದು ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಪ್ರಾದೇಶಿಕ ಆಯುಕ್ತರು 15 ಜನರ ಸದಸ್ಯತ್ವ ರದ್ದುಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ಶಿಫಾರಸ್ಸಿನ ಆಧಾರದ ಮೇಲೆ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ)ರ ಅಡಿಯಲ್ಲಿ ಸದಸ್ಯತ್ವವನ್ನ ರದ್ದುಗೊಳಿಸಲಾಗಿದೆ.
Advertisement
ಗ್ರಾ.ಪಂ ಸದಸ್ಯರುಗಳಾದ ಮಲ್ಲೇಶ 9,400 ರೂ., ವೀರನಗೌಡ 17,200 ರೂ., ಹನುಮಂತ 8,000 ರೂ., ಕಾಮಾಕ್ಷಮ್ಮ 10,900 ರೂ., ಜಯಶೀಲ 3,600 ರೂ. ಪಡೆದುಕೊಂಡಿದ್ದು, ಉಳಿದ 3 ಸಾವಿರ ಹಣವನ್ನ ಸಹ ಮರಳಿ ಖಾತೆಗೆ ಜಮಾ ಮಾಡಿಲ್ಲ. ಬಸಪ್ಪ 16,700 ರೂ., ರಮೇಶ್ 3,100 ರೂ., ದೌಲತ್ ಸಾಬ್ 4,800 ರೂ., ಚೆಕ್ ಪಡೆದ್ದುಕೊಡಿದ್ದರು. ಇದನ್ನ ವಾಪಾಸ್ ಡಿಡಿ ಮೂಲಕ ನೀಡುವುದಾಗಿ ತಿಳಿಸಿದ್ದರು. ಇನ್ನುಳಿದ ಏಳು ಜನರಲ್ಲಿ ಚೆಕ್ ಮೂಲಕ ಪಂಚಾಯ್ತಿ ಅಧ್ಯಕ್ಷೆ ಮಹಾಂತಮ್ಮ 4,500 ರೂಪಾಯಿ, ಉಪಾಧ್ಯಕ್ಷೆ ಯಲ್ಲಮ್ಮ 4,900 ರೂ., ಪಾರ್ವತಮ್ಮ 4,900 ರೂ., ಸುಜಾತ ಹಾಗೂ ಹುಲಿಗೆಮ್ಮ ತಲಾ 8,900 ರೂ., ಅಮೀನಾ ಬೇಗಂ 4,500 ರೂ., ಸುಶೀಲಮ್ಮ 6,000 ರೂ. ಹಣ ಪಡೆದಿರುವುದು ಖಾತರಿಯಾಗಿದೆ.
Advertisement
ಗ್ರಾಮ ಪಂಚಾಯ್ತಿಯ 17 ಜನ ಸದಸ್ಯರ ಪೈಕಿ 15 ಜನ ಸದಸ್ಯರು ಭ್ರಷ್ಟಾಚಾರ ಆರೋಪದ ಮೇಲೆ ಸದಸ್ಯತ್ವ ಕಳೆದುಕೊಂಡಿದ್ದಾರೆ. ಇಷ್ಟು ಜನ ಸದಸ್ಯತ್ವ ಕಳೆದುಕೊಳ್ಳುವ ಮೂಲಕ ಗ್ರಾಮ ಪಂಚಾಯ್ತಿ ಅಪಖ್ಯಾತಿಗೆ ಒಳಗಾಗಿದೆ.