ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ಒಂದು ಸಮುದಾಯದವರು ಆಗಾಗ ಕಾಡುಪ್ರಾಣಿಗಳನ್ನು ಬೇಟೆಯಾಡಿ ಮಾಂಸ ಹಂಚಿಕೊಳ್ಳುವ ಪದ್ಧತಿ ಇದೆ. ಕಾಡುಪ್ರಾಣಿಗಳ ಶಿಕಾರಿಗೆ ಮನೆಗೊಂದು ಆಳಿನಂತೆ ಹೋಗಬೇಕು, ಹೋಗದಿದ್ದರೆ ದಂಡ ಕಟ್ಟಬೇಕು. ದಂಡವನ್ನು ಕಟ್ಟದಿದ್ದರೆ ಅಂತಹವರಿಗೆ ಬಹಿಷ್ಕಾರ ಹಾಕಲಾಗುತ್ತದೆ. ಇದೀಗ ಕಾಡುಪ್ರಾಣಿಗಳ ಶಿಕಾರಿಗೆ ಒಪ್ಪದ 15 ಕುಟುಂಬಗಳಿಗೆ ಸಾಮಾಜಿಕ ಹಾಕಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯಾರಣ್ಯ ಅಂಚಿನಲ್ಲಿರುವ ಈ ಗ್ರಾಮದ ಒಂದು ಸಮುದಾಯದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿ, ಬೇಟೆಯಾಡಿದ ಪ್ರಾಣಿಯನ್ನು ಗ್ರಾಮಕ್ಕೆ ತಂದು ಮಾಂಸ ಹಂಚಿಕೊಳ್ಳುವ ಪದ್ಧತಿ ಇದೆ. ಇಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿದ್ದು ಗ್ರಾಮದ ಮುಖ್ಯಸ್ಥರು ಕಾಡುಪ್ರಾಣಿಗಳ ಶಿಕಾರಿಗೆ ಹೋಗಲು ದಿನ ನಿಗದಿಪಡಿಸುತ್ತಾರೆ. ಆ ದಿನ ಮನೆಗೊಬ್ಬರಂತೆ ಬೇಟೆಗೆ ಹೋಗಲೇಬೇಕು. ಹೋಗಲು ಸಾಧ್ಯವಾಗದಿದ್ದರೆ ಮುಖ್ಯಸ್ಥರು ವಿಧಿಸುವ ದಂಡ ಕಟ್ಟ ಬೇಕು.
Advertisement
Advertisement
ಇತ್ತೀಚೆಗೆ ಕೆಲವರು ಈ ಪದ್ಧತಿಗೆ ವಿರೋಧ ವ್ಯಕ್ತಪಡಿಸಿ ಕಾಡುಪ್ರಾಣಿಗಳ ಬೇಟೆಯಿಂದ ದೂರ ಉಳಿದಿದ್ದಾರೆ. ಅಂತವರಿಗೆ ಗ್ರಾಮದ ಮುಖ್ಯಸ್ಥರು ದಂಡ ವಿಧಿಸಿದ್ದಾರೆ. ಆದರೆ ದಂಡ ಕಟ್ಟಲು ನಿರಾಕರಿಸಿದ್ದಕ್ಕೆ ಸುಮಾರು 15 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರಕ್ಕೆ ಒಳಗಾದವರನ್ನು ಯಾರು ಮಾತನಾಡಿಸುವಂತಿಲ್ಲ, ಅವರನ್ನು ಕೂಲಿ ಕೆಲಸಕ್ಕೂ ಕರೆಯುವಂತಿಲ್ಲ. ಅಂಗಡಿಯಲ್ಲಿ ವಸ್ತುಗಳನ್ನು ಕೊಡುವಂತಿಲ್ಲ. ಯಾರಾದರು ಮೃತಪಟ್ಟರೂ ಹೋಗುವಂತಿಲ್ಲ ಎಂದು ಕಟ್ಟಪ್ಪಣೆ ವಿಧಿಸಲಾಗಿದೆ.
Advertisement
Advertisement
ಈ ಬಗ್ಗೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಎರಡೂ ಕಡೆಯವರನ್ನು ಕರೆಸಿ ಕೇವಲ ಎಚ್ಚರಿಕೆ ನೀಡಿ ಕೈ ತೊಳೆದುಕೊಂಡಿದ್ದಾರೆ. ಆದರೆ ಸಾಮಾಜಿಕ ಬಹಿಷ್ಕಾರ ಮುಂದುವರಿದಿದ್ದು, ಇದರಿಂದ ಈ 15 ಕುಟುಂಬಗಳು ಎಲ್ಲರಂತೆ ಬದುಕು ನಡೆಸಲಾಗದೆ ನಲುಗಿ ಹೋಗಿವೆ.