– ಮದ್ವೆಯಾಗಿ 9 ವರ್ಷದ ನಂತ್ರ ಮಗು ಜನನ
ಮಂಡ್ಯ: ಮಹಾಮಾರಿ ಕೊರೊನಾಗೆ 15 ದಿನಗಳ ಅಂತರದಲ್ಲಿ ತಂದೆ-ತಾಯಿ ಬಲಿಯಾಗಿದ್ದಾರೆ. ಪರಿಣಾಮ 5 ದಿನದ ಹೆಣ್ಣು ಮಗು ಅನಾಥವಾಗಿದೆ.
ಮೃತರನ್ನು ನಂಜುಂಡೇಗೌಡ(45) ಹಾಗೂ ಮಮತಾ(31) ಎಂದು ಗುರುತಿಸಲಾಗಿದೆ. ಇವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದ ನಿವಾಸಿಗಳು. ಮೃತ ನಂಜೇಗೌಡ ಅವರು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು.
ಏಪ್ರಿಲ್ ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂಜುಂಡೇಗೌಡ, ಏಪ್ರಿಲ್ 30 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಳಿಕ ತುಂಬು ಗರ್ಭಿಣಿಯಾಗಿದ್ದ ನಂಜುಂಡೇಗೌಡ ಪತ್ನಿ ಮಮತಾಗೂ ಸೋಂಕು ದೃಢಪಟ್ಟಿತ್ತು. ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇತ್ತ ಉಸಿರಾಟದ ಸಮಸ್ಯೆ ಎದುರಾದಾಗ ಮಿಮ್ಸ್ ಗೆ ದಾಖಲು ಮಾಡಲಾಯಿತು. ಮೇ.11ರಂದು ಮಮತಾ ಹೆಣ್ಣು ಮಗುವಿಗೆ ಜನ್ಮ ಕೂಡ ನೀಡಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಮಮತಾ ಮೃತಪಟ್ಟರು.
ಮೃತ ನಂಜುಂಡೇಗೌಡಗೆ 22 ವರ್ಷದ ಹಿಂದೆಯೇ ಮದುವೆಯಾಗಿದ್ದು, ಓರ್ವ ಮಗನೂ ಇದ್ದಾನೆ. ಪತ್ನಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ 9 ವರ್ಷದ ಹಿಂದೆ ಮಮತಾ ಜೊತೆಗೆ ನಂಜುಂಡೇ ಗೌಡ 2ನೇ ಮದುವೆಯಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ. 9 ವರ್ಷದ ಬಳಿಕ ಮಗು ನೋಡುವ ನಿರೀಕ್ಷೆಯಲ್ಲಿದ್ದ ನಂಜುಂಡೇಗೌಡ ಅವರು ಮಗು ಜನಿಸುವ ಮೊದಲೇ ಮೃತಪಟ್ರೆ, ಅವರ ಪತ್ನಿ ಮಮತಾ ಮಗುವಿಗೆ ಜನ್ಮ ನೀಡಿದ ನಾಲ್ಕೇ ದಿನಕ್ಕೆ ಕೊರೊನಾಗೆ ಬಲಿಯಾಗಿದ್ದಾರೆ. ನಾಗಮಂಗಲ ತಹಸೀಲ್ದಾರ್, ಅಮಹದ್ ಮೃತ ದಂಪತಿ ಮನೆಗೆ ಭೇಟಿ ನೀಡಿ, ಧೈರ್ಯ ತುಂಬುವ ಕೆಲಸ ಮಾಡಿ, ಮಗುವನ್ನು ತಮಗೆ ನೀಡುವುದಾಗಿ ಕೇಳಿದ್ರು. ಆದರೆ ಕುಟುಂಬಸ್ಥರು ತಾವೇ ಮಗುವನ್ನು ಆರೈಕೆ ಮಾಡುವುದಾಗಿ ತಿಳಿಸಿದ್ರು.
ಒಟ್ಟಾರೆ 9 ವರ್ಷದ ಬಳಿಕ ಮಗು ಜನಿಸಿದ್ದಕ್ಕೆ ಖುಷಿಯಿಂದ ತೇಲಾಡಬೇಕಿದ್ದ ಹೆತ್ತವರು ಕ್ರೂರಿ ಕರೊನಾಗೆ ಬಲಿಯಾಗಿದ್ರೆ, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ. ಮೃತ ದಂಪತಿ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿತು.